ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕಳೆದ 24 ತಾಸುಗಳಲ್ಲಿ ಒಟ್ಟು ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ ಮತ್ತು ಒಂದು ಅಮೆರಿಕನ್ ಎಂ4 ಸ್ನೆ„ಪರ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ; ಒಬ್ಬ ಉಗ್ರನನ್ನು ಜೀವಂತ ಸೆರೆ ಹಿಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬಡಗಾಂವ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ನಸುಕಿನ ವೇಳೆ ನಡೆಸಲಾದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾದರು. ಐವರು ಸೈನಿಕರು ಗಾಯಗೊಂಡರು. ಹತರಾದ ಉಗ್ರರು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.
ಸೂಸ್ತು ಗ್ರಾಮದಲ್ಲಿ ಈ ಎನ್‌ಕೌಂಟರ್ ನಡೆದ ಬಳಿಕ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡವು; ಅದೀಗ ಇನ್ನೂ ಜಾರಿಯಲ್ಲಿದೆ; ಇಲ್ಲಿ ಉಗ್ರರ ಬಳಿ ಇದ್ದ ಒಂದು ಎಕೆ 47 ರೈಫಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದಿರುವ ತಾಣದಲ್ಲೀಗ ನೆಲ ಬಾಂಬ್ ವಿಲೇವಾರಿ ಪರಿಣತರು ಕಾರ್ಯಾಚರಿಸುತ್ತಿದ್ದು ಸ್ಥಳೀಯರು ಯಾರೂ ಅಲ್ಲಿಗೆ ಹೋಗಕೂಡದು ಎಂದ ಸೇನೆ ಎಚ್ಚರಿಸಿದೆ.
ನಿನ್ನೆ ಗುರುವಾರ ಶೋಪಿಯಾನ್ ಮತ್ತು ಕುಪ್ವಾರಾ ದಲ್ಲಿ ನಡೆದಿದ್ದ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದರು.
ಶೋಪಿಯಾನ್ ನಲ್ಲಿನ ಯಾವರಾನ್ ಅರಣ್ಯದಲ್ಲಿ ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಆಗ ನಡೆದಿದ್ದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾದರು.
ಹತ ಉಗ್ರರನ್ನು ಸಾಜದ್ ಖಾಂಡೇ, ಆಕಿಬ್ ಅಹ್ಮದ್ ದಾರ್ ಮತ್ತು ಬಷರತ್ ಅಹ್ಮದ್ ಮೀರ್ (ಇವರೆಲ್ಲ ಪುಲ್ವಾಮಾ ನಿವಾಸಿಗಳು) ಎಂದು ಗುರುತಿಸಲಾಗಿದೆ.