ಜಮ್ಮು : ಜನದಟ್ಟನೆಯ ಜಮ್ಮು ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಇಂದು ಗುರುವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಓರ್ವ ವ್ಯಕ್ತಿ ಮಡಿದಿದ್ದು ದಾಳಿಗೆ ಕಾರಣನೆಂದು ಶಂಕಿಸಲಾದ ಓರ್ವ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ನಡೆದಿದ್ದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 28 ಮಂದಿ ಗಾಯಗೊಂಡಿದ್ದರು. ಮೂವರ ಸ್ಥಿತಿ ಚಿಂತಾಜನಕವಿತ್ತು. ಗಾಯಾಳುಗಳನ್ನು ಒಡನೆಯೇ ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಯಿತು.
ಗ್ರೆನೇಡ್ ದಾಳಿಯ ಶಂಕಿತನೆಂದು ಬಂಧಿಸಲ್ಪಟ್ಟಿರುವ ಉಗ್ರನು ದಕ್ಷಿಣ ಕಾಶ್ಮೀರದ ನಿವಾಸಿ ಎಂದು ಗೊತ್ತಾಗಿದ್ದು ಆತ ಉಗ್ರ ಸಮೂಹವೊಂದಕ್ಕೆ ಸೇರಿರುವವನೆಂದು ತಿಳಿದು ಬಂದಿದೆ.
ಗ್ರೆನೇಡನ್ನು ಹೊರಗಿನಿಂದ ತಂದು ಬಸ್ಸಿನಡಿ ಉರುಳಿಸಲಾಗಿತ್ತು ಎಂದು ಜಮ್ಮು ಐಜಿಪಿ ಎಂ ಕೆ ಸಿನ್ಹಾ ತಿಳಿಸಿದ್ದಾರೆ. ಬಸ್ಸಿನಡಿ ಉರುಳಿಸಲ್ಪಟ್ಟ ಗ್ರೆನೇಡ್ ನ್ಪೋಟಗೊಂಡು ಅದರೊಳಗಿನ ಹರಿತವಾದ ಚೂರುಗಳು ಸಣ್ಣ ಪ್ರದೇಶಕ್ಕೆ ಸೀಮಿತವಾಗಿ ಸಿಡಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೆನೇಡ್ ದಾಳಿ ನಡೆದ ತಾಣ ಮತ್ತು ಅದನ್ನು ತಲುಪುವ ಬಿಸಿ ರೋಡ್ ಮುಚ್ಚಲಾಗಿದ್ದು ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಶ್ವಾನ ದಳವನ್ನು ಕರೆಸಿಕೊಳ್ಳಲಾಗಿದೆ. ಫೊರೆನ್ಸಿಕ್ ಪರಿಣತರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಜಮ್ಮುವಿನಲ್ಲಿ ಈ ವರ್ಷ ಮೇ ತಿಂಗಳ ಬಳಿಕದಲ್ಲಿ ನಡೆದಿರುವ 3ನೇ ಗ್ರೆನೇಡ್ ದಾಳಿ ಇದಾಗಿದೆ.