ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ, ಜಮ್ಮುವಿನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ವಾಸಿವಿರುವ ಜನರಿಗೆ ನಿವಾಸದ ಪ್ರಮಾಣಪತ್ರವನ್ನು ನೀಡಲು ಎಲ್ಲಾ ತಹಶೀಲ್ದಾರ್ ಗಳಿಗೆ ಅಧಿಕಾರ ನೀಡಿದ ಅಧಿಸೂಚನೆಯನ್ನು ಜಮ್ಮುವಿನ ಡೆಪ್ಯುಟಿ ಕಮಿಷನರ್ ಹಿಂಪಡೆದಿದ್ದಾರೆ.
ಜಿಲ್ಲೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಾಸಿಸುವ ಜನರಿಗೆ ನಿವಾಸದ ಪ್ರಮಾಣಪತ್ರವನ್ನು ನೀಡಲು ಎಲ್ಲಾ ತಹಶೀಲ್ದಾರ್ ಗಳಿಗೆ (ಕಂದಾಯ ಅಧಿಕಾರಿಗಳು) ಅಧಿಕಾರ ನೀಡಿ ಜಮ್ಮು ಆಡಳಿತವು ಆದೇಶ ಹೊರಡಿಸಿದ ಒಂದು ದಿನದ ನಂತರ ಆದೇಶ ಹಿಂಪಡೆಯಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ನೋಂದಣಿಗೆ ಅರ್ಹ ಮತದಾರರು ಬಾಕಿ ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿವಾಸದ ಪ್ರಮಾಣ ಪತ್ರ ನೀಡಲು ಉದ್ದೇಶಿಸಲಾಗಿತ್ತು.
ಆದರೆ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಈ ಆದೇಶವನ್ನು ವಿರೋಧಿಸಿವೆ. ಈ ನೀತಿಯಿಂದ ಜಮ್ಮು ಮತ್ತು ಕಾಶ್ಮೀರ ಮತದಾರನ ಮತದ ಮೌಲ್ಯವನ್ನು ಕೊನೆಗೊಳಿಸಲಾಗುತ್ತದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಈ ಕಾನೂನು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ದೇಶದಲ್ಲಿ ಎಲ್ಲಿಯೂ ಅನ್ವಯಿಸುವುದಿಲ್ಲ ಮತ್ತು ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ಮೂಲ ನಾಗರಿಕರನ್ನು ನಿರ್ಮೂಲನೆ ಮಾಡಲು ಮತ್ತು ಹೊರಗಿನವರನ್ನು ನೆಲೆಸುವಂತೆ ಮಾಡುತ್ತಿದೆ ” ಎಂದು ಪಿಡಿಪಿ ಮುಖ್ಯಸ್ಥೆ ಹೇಳಿದರು.
“ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಹೆಚ್ಚಿನ ಅಪರಾಧ ಪ್ರಮಾಣವಿದೆ. ಬಿಜೆಪಿಯು ಇಲ್ಲಿನ ಸಮುದಾಯಗಳ ನಡುವೆ ಘರ್ಷಣೆಯನ್ನು ಸೃಷ್ಟಿಸಲು ಬಯಸಿದೆ ” ಎಂದು ಅವರು ಹೇಳಿದರು.