ಶ್ರೀನಗರ : ನಿನ್ನೆ ಮಂಗಳವಾರ ಭದ್ರತಾ ಪಡೆಗಳಿಂದ ಹತನಾಗಿದ್ದ ಪಾಕ್ ಮೂಲದ ಲಷ್ಕರ್ ಎ ತಯ್ಯಬ ಸಂಘಟನೆಯ ಉಗ್ರ ಅಬು ದುಜಾನ್‌ನ ಮೃತ ದೇಹವವನ್ನು ಸ್ವೀಕರಿಸುವಂತೆ ದಿಲ್ಲಿಯಲ್ಲಿ ಪಾಕ್ ಹೈಕಮಿಶನ್ ಕಾರ್ಯಾಲಯವನ್ನು ಕೇಳಿಕೊಳ್ಳಲು ಜಮ್ಮು ಕಾಶ್ಮೀರ ಪೊಲೀಸರು ಸಂಪರ್ಕಿಸಲಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹತನಾದ ಪಾಕ್ ಪ್ರಜೆಯ ಮೃತ ದೇಹವನ್ನು ಆತನ ಹೆತ್ತವರಿಗಾಗಿ ಸ್ವೀಕರಿಸುವಂತೆ ಭಾರತೀಯ ಅಧಿಕಾರಿಗಳು ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿನ ಪಾಕ್ ಹೈಕಮಿಷನನ್ನು ಕೇಳಿಕೊಳ್ಳುತ್ತಿದ್ದಾರೆ.
ಹತ ಉಗ್ರ ದುಜಾನಾ, ಪಾಕ್ ಆಕ್ರಮಿತ ಕಾಶ್ಮೀರದ ಗಿಲ್‌ಗಿಟ್ – ಬಾಲ್ಟಿಸ್ಥಾನ್‌ಗೆ ಸೇರಿದವನಾಗಿದ್ದಾನೆ.
“ಒಂದೊಮ್ಮೆ ಪಾಕ್ ಸರಕಾರ ಉಗ್ರ ದುಜಾನಾ ನ ಮೃತ ದೇಹವನ್ನು ಸ್ವೀಕರಿಸಲು ಒಪ್ಪದಿದ್ದರೆ ನಾವೇ ಆತನ ದಫನ ಕಾರ್ಯವನ್ನು ನಡೆಸುವೆವು’ ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ.
“ಉಗ್ರ ದುಜಾನಾ ನ ಮೃತ ದೇಹವನ್ನು ಆತನ ಹೆತ್ತವರು ದಫನಕ್ಕೆ ಮುನ್ನ ಕೊನೇ ಬಾರಿಗೊಮ್ಮೆ ನೋಡಬೇಕು ಎಂದು ನಾವು ಆಶಿಸುತ್ತೇವೆ. ಅದಕ್ಕಾಗಿ ನಾವು ದಿಲ್ಲಿಯಲ್ಲಿನ ಪಾಕ್ ಹೈಕಮಿಶನ್ ಕಾರ್ಯಾಲಯವನ್ನು ಸಂಪರ್ಕಿಸಲಿದ್ದೇವೆ’ ಎಂದು ಐಜಿಪಿ ಹೇಳಿದರು.
ಹಕಡೀಪೋರಾ ಗ್ರಾಮದಲ್ಲಿ ನಿನ್ನೆ ಮಂಗಳವಾರ ಅಬು ದುಜಾನಾ ಜತೆಗೆ ಹತನಾಗಿದ್ದ ಎಲ್‌ಇಟಿ ಉಗ್ರ ಆರಿಫ್ ಲಾಲಿಹಾರಿ ಎಂಬಾತನನ್ನು ಆತನ ಹುಟ್ಟೂರಾದ ಪುಲ್ವಾಮಾ ಜಿಲ್ಲೆಯ ಲಾಲಿಹಾರಿ ಗ್ರಾಮದಲ್ಲಿ ದಫನಮಾಡಲಾಗಿದೆ.