ಲಂಡನ್: ಜಮ್ಮು-ಕಾಶ್ಮೀರದ ವಿಚಾರವನ್ನು ಪದೇ ಪದೇ ವಿಶ್ವಸಂಸ್ಥೆಯ ಅಂಗಳಕ್ಕೆ ಒಯ್ಯುತ್ತಿರುವ ಪಾಕಿಸ್ಥಾನದ ನಡೆಯನ್ನು ಬ್ರಿಟನ್ ಸಂಸದ ಬಾಬ್ ಬ್ಲ್ಯಾಕ್ ಮನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೇ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ಮೊದಲು ಪಾಕ್ ತೆರವುಗೊಳಿಸಬೇಕು ಎಂದೂ ಸಹ ಬಾಬ್ ಉಗ್ರ ಪೋಷಕ ರಾಷ್ಟ್ರಕ್ಕೆ ತಾಕೀತು ಮಾಡಿದ್ದಾರೆ.
‘ಜಮ್ಮು ಕಾಶ್ಮೀರದ ಪೂರ್ತಿ ಭೂಪ್ರದೇಶವು ಭಾರತದ ಸಾರ್ವಭೌಮತ್ವಕ್ಕೆ ಸೇರಿದ್ದಾಗಿದೆ. ವಿಶ್ವಸಂಸ್ಥೆಯ ನಿಲುವಳಿ ಅನುಷ್ಠಾನಗೊಳ್ಳಬೇಕು ಎಂದು ಆಗ್ರಹಿಸುವವರು, ಪಾಕಿಸ್ಥಾನೀ ಸೇನೆ ಕಾಶ್ಮೀರದಿಂದ ಹೊರಬರುವ ಮೂಲಕ ಪೂರ್ತಿ ಭೂಪ್ರದೇಶ ಏಕೀಕೃತಗೊಳ್ಳುವಂತಾಗಲು ಸಾಧ್ಯವಾಗಬೇಕೆಂಬುದನ್ನು ಆಗ್ರಹಿಸುವುದಕ್ಕೆ ಮರೆಯುತ್ತಾರೆ’ ಎಂದು ಬಾಬ್ ಹೆಳಿದರು.
ಜಮ್ಮು ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಪ್ರಸ್ತಾಪಿಸುವುದಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದನ್ನು ಐ.ಸಿ.ಜೆ.ಯಲ್ಲಿ ಪ್ರಶ್ನಿಸುವುದಾಗಿ ಪಾಕಿಸ್ಥಾನದ ಶಾ ಮಹಮ್ಮದ್ ಖುರೇಷಿ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಇತ್ತ ಶುಕ್ರವಾರದಂದು ಪಾಕಿಸ್ಥಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್ ನಲ್ಲಿ ಕಾಶ್ಮೀರ ಜನತೆಯ ಸ್ವಾಯತ್ತತೆಗಾಗಿ ಜಾಥಾ ಒಂದನ್ನು ಸಹ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಅವರು, ‘ನಾನು ಮುಂದಿನ ವಾರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದೇನೆ, ಮತ್ತು ಈ ಸಂದರ್ಭದಲ್ಲಿ ನಾನು ಕಾಶ್ಮೀರದ ಜನತೆಯನ್ನು ನಿರಾಶೆಗೊಳಿಸುವುದಿಲ್ಲ’ ಎಂದು ಅವರು ಹೇಳಿದ್ದರು.