Advertisement

Jammu and Kashmir; ಉಗ್ರರ ಕಾಲಿಗೆ ಜಿಪಿಎಸ್‌ ಟ್ರ್ಯಾಕರ್‌: ಸ್ವಾಗತಾರ್ಹ

12:37 AM Nov 06, 2023 | Team Udayavani |

ಉಗ್ರಗಾಮಿ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ವಿನೂತನ ಉಪಕ್ರಮವೊಂದಕ್ಕೆ ಚಾಲನೆ ನೀಡಿದ್ದಾರೆ. ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು ಮತ್ತು ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಯಾಗುವ ಉಗ್ರರ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಅವರ ಕಾಲುಗಳಿಗೆ ಜಿಪಿಎಸ್‌ ಟ್ರ್ಯಾಕರ್‌ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

Advertisement

ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆಯಾದರೂ ಭಾರತದಲ್ಲಿ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ಪೊಲೀಸರು ಈ ತಂತ್ರ ಜ್ಞಾನದ ಮೊರೆ ಹೋಗಿದ್ದಾರೆ. ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವನ್ನು ಕೇಂದ್ರ ಸರಕಾರ ಹಿಂದೆಗೆದುಕೊಂಡ ಬಳಿಕ ರಾಜ್ಯದಲ್ಲಿ ಉಗ್ರಗಾಮಿ ಕೃತ್ಯಗಳು ಗಣನೀಯವಾಗಿ ಕಡಿಮೆಯಾಗಿವೆ. ಆದರೂ ನೆರೆಯ ಪಾಕಿಸ್ತಾನದಿಂದ ಉಗ್ರರು ರಾಜ್ಯದೊಳಕ್ಕೆ ಒಳನುಸುಳಿ ಉಗ್ರಗಾಮಿ ಕೃತ್ಯಗಳನ್ನು ಎಸಗುವ ಮೂಲಕ ರಾಜ್ಯದಲ್ಲಿ ಶಾಂತಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುವ ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳು ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊ ಳ್ಳುವ ಮೂಲಕ ಅವರನ್ನು ಸದೆಬಡಿಯುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಉಗ್ರರು ಪದೇಪದೆ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಂಡು ರಾಜ್ಯದ ಅಲ್ಲಲ್ಲಿ ಅದರಲ್ಲೂ ಮುಖ್ಯವಾಗಿ ಗಡಿ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಬಂದಿದ್ದಾರೆ. ಬಹುತೇಕ ಉಗ್ರ ದಾಳಿಗಳ ಹಿಂದೆ ಈ ಹಿಂದಿನಿಂದಲೂ ಉಗ್ರಗಾಮಿ ಕೃತ್ಯಗಳಲ್ಲಿ ಭಾಗಿಯಾಗುತ್ತ ಬಂದಿರುವ ಉಗ್ರರ ಕೈವಾಡವಿರುವುದು ಬಂಧಿತ ಉಗ್ರರ ತನಿಖೆಯ ವೇಳೆ ಬಯಲಾಗಿತ್ತು. ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಉಗ್ರರು ಇನ್ನೂ ಸಕ್ರಿಯವಾಗಿರುವುದು ರಾಜ್ಯದ ಪೊಲೀಸರಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಉಗ್ರರ ಮೇಲೆ ನಿಗಾ ಇಡಲು ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದ್ದಾರೆ. ಈ ವ್ಯವಸ್ಥೆಯಡಿ ಉಗ್ರರ ಕಾಲಿಗೆ ಜಿಪಿಎಸ್‌ ಟ್ರ್ಯಾಕರ್‌ಗಳನ್ನು ಅಳವಡಿಸಿ, ಅವರ ಸಂಪೂರ್ಣ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ಕಣ್ಗಾವಲಿಡಲಾಗುವುದು. ಇದರಿಂದ ಸಂಭಾವ್ಯ ಉಗ್ರ ಕೃತ್ಯ ಮತ್ತು ಅಪರಾಧ ಪ್ರಕರಣಗಳನ್ನು ಕೃತ್ಯಕ್ಕೂ ಮುನ್ನವೇ ಭೇದಿಸಲು ಮತ್ತು ಅಮಾಯಕರ ರಕ್ಷಣೆಯೂ ಸಾಧ್ಯವಾಗಲಿದೆ. ಅಷ್ಟು ಮಾತ್ರವಲ್ಲದೆ ಉಗ್ರರ ಷಡ್ಯಂತ್ರ ಮತ್ತು ಉಗ್ರರ ಸಂಪೂರ್ಣ ಜಾಲವನ್ನೂ ಪತ್ತೆಹಚ್ಚಲು ಈ ತಂತ್ರಜ್ಞಾನ ಪೊಲೀಸರಿಗೆ ನೆರವಾಗಲಿದೆ. ಕಣಿವೆ ರಾಜ್ಯದಲ್ಲಿ ಉಗ್ರಗಾಮಿ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಕ್ರಮವಾಗಿ ಪೊಲೀಸರು ಈ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸರ ಈ ನಡೆ ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದ್ದು ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಪರಾಧಿಗಳಿಗೂ ಇಂತಹ ಟ್ರ್ಯಾಕರ್‌ ವ್ಯವಸ್ಥೆಯನ್ನು ಅಳವಡಿಸಿದರೆ ಕಾನೂನು-ಸುವ್ಯವಸ್ಥೆ ಪಾಲನೆಯಲ್ಲಿ ಪೊಲೀಸರಿಗೆ ಬಹಳಷ್ಟು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next