Advertisement
ಭಾರೀ ಭದ್ರತೆಯ ನಡುವೆ ಈ ಬಾರಿ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸಕಲ ಸಿದ್ಧತೆಗಳೊಂದಿಗೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25, ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕಣಿವೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ – ಒಮರ್ ಅಬ್ದುಲ್ಲಾ ಅವರೊಂದಿಗೆ ಕೈಜೋಡಿಸಿದೆ. ಹಲವು ಗೊಂದಲಗಳ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಮಾಡಿಕೊಂಡಿದೆ. ನ್ಯಾಷನಲ್ ಕಾನ್ಫರೆನ್ಸ್(National Conference) 51 ಸ್ಥಾನಗಳಲ್ಲಿಸ್ಪರ್ಧಿಸಲಿದ್ದು, 32 ಕ್ಷೇತ್ರಗಳಲ್ಲಿ ಕಾಂಗ್ರೆಸ್(Congress) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಐದು ಸ್ಥಾನಗಳ ವಿಚಾರ ಬಗೆ ಹರಿಸಲು ಸಾಧ್ಯವಾಗದೆ ಸೌಹಾರ್ದಯುತ ಶಿಸ್ತಿನ ಸ್ಪರ್ಧೆಯನ್ನು ನಡೆಸುತ್ತಿದ್ದೇವೆ ಎಂದು ತೇಪೆ ಹಚ್ಚಿದೆ.
Related Articles
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ರಣತಂತ್ರಗಳನ್ನು ಖುದ್ದು ರೂಪಿಸಿದ್ದಾರೆ. ಕೆಲ ಗೊಂದಲಗಳೂ ಪಕ್ಷದಲ್ಲಿ ಕಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅಭ್ಯರ್ಥಿಗಳ ಪಟ್ಟಿ. ಪಟ್ಟಿ ಬಿಡುಗಡೆ ಮಾಡಿದ ಕೆಲ ಹೊತ್ತಲ್ಲೇ ಹಿಂಪಡೆದು ಮತ್ತೆ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮಾಡಿದ ಈ ರೀತಿಯ ಕೆಲವು ಗೊಂದಲಕಾರಿ ನಡೆಗಳು ಕೆಲ ಕ್ಷೇತ್ರಗಳ ಸೋಲಿಗೆ ಕಾರಣವಾಗಿತ್ತು.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರೇ ಮುಂಚೂಣಿಯಲ್ಲಿದ್ದು, ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಅವರು ಪ್ರಚಾರಕ್ಕಿಳಿದಿರುವ ಪ್ರಮುಖ ಘಟಾನುಘಟಿ ನಾಯಕರಾಗಿದ್ದಾರೆ. ಕಾಶ್ಮೀರಿ ಪಂಡಿತರು ಘನತೆಯಿಂದ ಕಣಿವೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಈ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ ಎಂದು ಬಿಜೆಪಿ ಹೇಳಿದೆ. ಎಲ್ಒಸಿಯಲ್ಲಿರುವ ಶಾರದಾ ಪೀಠವನ್ನು ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿ ಮಾಡುವ ಯೋಜನೆಯೂ ಬಿಜೆಪಿಯದ್ದಾಗಿದೆ.
ಕಾಂಗ್ರೆಸ್ ತೊರೆದು ಪಕ್ಷ ಹುಟ್ಟು ಹಾಕಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಆರೋಗ್ಯ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು ತಮ್ಮ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಪಕ್ಷ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಅಜಾದ್ ಅವರು ಪ್ರಚಾರದಿಂದ ದೂರ ಸರಿದಿರುವುದು ಕಾಂಗ್ರೆಸ್ -ಎನ್ ಸಿ ಮೈತ್ರಿಕೂಟಕ್ಕೆ, ಪಿಡಿಪಿಗೆ ಮತವಿಭಜನೆ ಭೀತಿ ದೂರ ಮಾಡಿದೆ.
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟಕ್ಕೆ ಸವಾಲು ಒಡ್ಡಿದ್ದಾರೆ. ಈಗಾಗಲೇ ಪ್ರಚಾರಕ್ಕೆ ಧುಮುಕಿರುವ ಅವರು ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಆಮ್ ಆದ್ಮಿಯಿಂದಲೂ ಹೋರಾಟ
ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗಿಳಿದಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿತ್ತು. ಇಂಜಿನಿಯರ್ ರಶೀದ್ (ಶೇಖ್ ಅಬ್ದುಲ್ ರಶೀದ್) ಬಾರಾಮುಲ್ಲಾ ದಲ್ಲಿ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸಿ ಜೈಲಿನಿಂದಲೇ ಜಯ ಸಾಧಿಸಿದ್ದರು. ಕಾಶ್ಮೀರಿ ಪ್ರತ್ಯೇಕತಾವಾದವನ್ನು ಪ್ರತಿಪಾದಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದರು. ಈ ಬಾರಿಯೂ ಇದೆ ರೀತಿ ಹಲವರು ಕಣಕ್ಕಿಳಿದಿದ್ದು ಕೆಲ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳೂ ಇವೆ ಎನ್ನಬಹುದು. ಆರ್ಟಿಕಲ್ 370 ಮತ್ತು 35A ಅನ್ನು ಮರುಸ್ಥಾಪಿಸುವ ಪ್ರತಿಪಕ್ಷಗಳ ವಿಚಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತಿದೆ. ಭಾರತ ಮತ್ತು ಪಾಕಿಸ್ಥಾನದ ನಡುವೆ ರಾಜತಾಂತ್ರಿಕ ಮಾತುಕತೆಗಳ ಬೇಡಿಕೆಯೂ ಪ್ರಮುಖ ವಿಚಾರವಾಗಿದೆ. 2014 ರಲ್ಲಿ ಅತಂತ್ರ
2014 ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ87 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಂದಿತ್ತು. ಇದು ಮೈತ್ರಿ ಸರಕಾರ ನಿರ್ಮಾಣಕ್ಕೆ ಕಾರಣವಾಗಿತ್ತು. ಪಿಡಿಪಿ 28 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 25 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಎನ್ ಸಿ 15, ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ವಿಪಕ್ಷದಲ್ಲಿ ಕೂರಬೇಕಾಗಿತ್ತು. ಬಿಜೆಪಿಯು ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಪಿಡಿಪಿ ನಾಯಕ ಮುಫ್ತಿ ಮೊಹಮದ್ ಸಯೀದ್ ಮುಖ್ಯಮಂತ್ರಿಯಾಗಿದ್ದರು. 2016 ರಲ್ಲಿ ಮುಫ್ತಿ ಅವರ ನಿಧನಾನಂತರ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆಗಿದ್ದರು. 2018 ರಲ್ಲಿ ಬಿಜೆಪಿ ಬೆಂಬಲ ಹಿಂಪಡೆದುಕೊಂಡ ಬಳಿಕ ಸರಕಾರ ಪತನಗೊಂಡಿತ್ತು. 2018 ಜೂನ್ 20 ರಿಂದ ರಾಜ್ಯಪಾಲರ ಆಡಳಿತವಿದ್ದರೆ, ಡಿಸೆಂಬರ್ 20, 2018 ರಿಂದ ರಾಷ್ಟ್ರಪತಿ ಆಡಳಿತವಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಪ್ರಮುಖ ವಿಚಾರವಾಗಿದ್ದು, ಮೈತ್ರಿ ನಡೆಸಿ ಸುಸೂತ್ರ ಆಡಳಿತ ನಡೆಸುವುದು ಸುಲಭವಲ್ಲ ಎನ್ನುವುದು ಈಗಾಗಲೇ ನಿರೂಪಿತವಾಗಿದೆ. ಈ ಬಾರಿ ಮತದಾರರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.