ಶ್ರೀನಗರ: ಅತ್ಯಂತ ಮಹತ್ವದ ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೂರು ಹಂತದಲ್ಲಿ ನಡೆಯುವ ಚುನಾವಣೆಗೆ ರಾಜಕೀಯ ಪಕ್ಷಗಳು ತನ್ನ ಕಸರತ್ತು ಆರಂಭಿಸಿವೆ. ಇದೀಗ 90 ಕ್ಷೇತ್ರಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 44 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 19, 25 ಮತ್ತು ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದಾಗಿ ರಾಜ್ಯ ಸ್ಥಾನಮಾನ ಕೊನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಜಮ್ಮು ಕಾಶ್ಮೀರದಲ್ಲಿ 2014ರಲ್ಲಿ ಕೊನೆಯದಾಗಿ ವಿಧಾನಸಭೆ ಚುನಾವಣೆ ನಡೆದಿತ್ತು.
ಮೊದಲ ಪಟ್ಟಿಯಲ್ಲಿ ಕಾಣೆಯಾಗಿರುವ ಎರಡು ಪ್ರಮುಖ ಹೆಸರುಗಳೆಂದರೆ ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಕವೀಂದರ್ ಗುಪ್ತಾ ಮತ್ತು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಮುಖ್ಯಸ್ಥರಾಗಿರುವ ರವೀಂದರ್ ರೈನಾ.
ನ್ಯಾಷನಲ್ ಕಾನ್ಫರೆನ್ಸ್‌ನಿಂದ ಕಣಕ್ಕಿಳಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರ ಸಹೋದರ ದೇವೇಂದ್ರ ರಾಣಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಇಬ್ಬರು ಕಾಶ್ಮೀರಿ ಪಂಡಿತರನ್ನೂ ಕಣಕ್ಕಿಳಿಸಲಾಗಿದೆ. ಪಕ್ಷವು ಮೊದಲ ಪಟ್ಟಿಯಲ್ಲಿ 14 ಮುಸ್ಲಿಂ ಅಭ್ಯರ್ಥಿಗಳನ್ನು ಹೆಸರಿಸಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ರವಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾಗಿಯಾಗಿದ್ದರು.
ಬಿಜೆಪಿಯು ಪಟ್ಟಿಯಲ್ಲಿ 1ನೇ ಹಂತಕ್ಕೆ 15, 2ನೇ ಹಂತಕ್ಕೆ 10, 3ನೇ ಹಂತಕ್ಕೆ 19 ಅಭ್ಯರ್ಥಿಗಳನ್ನು ಹೆಸರಿಸಿದೆ.
ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು ಪಾಂಪೋರ್ ಕ್ಷೇತ್ರದಿಂದ ಸೈಯದ್ ಶೋಕತ್ ಗಯೂರ್ ಅಂದ್ರಾಬಿ ಮತ್ತು ಅನಂತನಾಗ್ ಪಶ್ಚಿಮದಿಂದ ಮೊಹಮ್ಮದ್ ರಫೀಕ್ ವಾನಿ.