ಕಲಬುರಗಿ: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮಹಾಘಟ್ ಬಂಧನದ ಭಾಗವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗುತ್ತದೆ ಎಂಬುದನ್ನು ತಡೆಯಬೇಕೆಂಬ ದುರುದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ರಾಜ್ಯಪಾಲರು ವಿಧಾನಸಭೆಯನ್ನು ಸಂವಿಧಾನ ಬಾಹಿರವಾಗಿ ವಿಸರ್ಜನೆಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಗೆ ಅವಕಾಶ ಕೊಡುವುದನ್ನು ಬಿಟ್ಟು ಯಾವ ಕಾರಣಕ್ಕಾಗಿ ರಾಜ್ಯಪಾಲರು ವಿಧಾನಸಭೆ ವಜಾಗೊಳಿಸಿದರು ಎಂಬುದು ಎಲ್ಲರಿಗೂ ತಿಳಿಯುವಂತಾಗಿದೆ. ಆ ಮೂಲಕ ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ. ಸಂವಿಧಾನ ಬಾಹಿರವಾಗಿ ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಮಾಡಿಸಿರುವ ಮೋದಿ, ಸ್ವಾರ್ಥ ಸಾಧನೆ ಮಾಡಿದ್ದಾರೆ. ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ಅಲ್ಲಿನ ಮುಖಂಡರೆಲ್ಲರೂ ಸೇರಿಕೊಂಡು ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಜಮ್ಮು-ಕಾಶ್ಮೀರ ರಾಜ್ಯಪಾಲರು ರಾಜೀನಾಮೆ ನೀಡಬೇಕು. ಇಲ್ಲವೇ, ಕೇಂದ್ರ ಸರ್ಕಾರ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಈ ಹಿಂದೆ ಇದೇ ತೆರನಾಗಿ ಬಿಹಾರ ವಿಧಾನಸಭೆ ವಿಸರ್ಜನೆಗೊಳಿಸಿದಾಗ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ರಾಜೀನಾಮೆ ನೀಡಿದ್ದರು. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ನತ್ತ ಒಲವು ಹೊಂದಿರುವುದು ಪ್ರಚಾರಕ್ಕೆ ಹೋದಾಗ ಗೊತ್ತಾಗಿದೆ. ಅಲ್ಲದೆ ಬಿಜೆಪಿಯಿಂದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ಎಲೆಕ್ಷನ್ ಸ್ಟಂಟ್: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಎಚ್‌ಪಿ ಇನ್ನಿತರ ಸಂಘ-ಪರಿವಾರದ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದು ಎಲೆಕ್ಷನ್ ಸ್ಟಂಟ್. ರಾಮ ಮಂದಿರ ನಿರ್ಮಿಸಬೇಕು ಎನ್ನುವವರು ಕಳೆದ ನಾಲ್ಕೂವರೆ ವರ್ಷಗಳಿಂದ ಏನು ನಿದ್ರೆ ಮಾಡುತ್ತಿದ್ದರಾ?. ಮಂದಿರ ನಿರ್ಮಾಣ ಮಾಡಬೇಕು ಎಂಬ ಉದ್ದೇಶವಿದ್ದರೆ ಆಗಲೇ ಮಾಡುತ್ತಿದ್ದರು. ಮೋದಿ ಸರ್ಕಾರ ಬಂದಾಗಿನಿಂದಲೇ ಹೋರಾಟ ಆರಂಭಿಸಬೇಕಾಗಿತ್ತು, ಬೇಡಿಕೆ ಮಂಡಿಸಬೇಕಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಹಾಗೂ ಅದರ ಮಿತ್ರ ಸಂಘಟನೆಗಳು ಇನ್ನಿಲ್ಲದ ನಾಟಕ ಶುರು ಮಾಡಿಕೊಂಡಿವೆ. ಐದು ತಿಂಗಳಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯನಾ ಎಂದು ಅವರು ಪ್ರಶ್ನಿಸಿದರು.