Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2019ರ ಲೋಕಸಭೆ ಚುನಾವಣೆ ವೇಳೆ ನೀಡಿದ್ದ ವಾಗ್ಧಾನದಂತೆ ಸಂವಿಧಾನದ 370ನೇ ವಿಧಿ ಅಥವಾ ಸಾಮಾನ್ಯವಾಗಿ ಹೇಳಿಕೊಂಡಿದ್ದಂತೆ ವಿಶೇಷ ಸ್ಥಾನಮಾನ ರದ್ದು ಮಾಡುವುದರ ಬಗ್ಗೆ ಖಡಕ್ ನಿರ್ಣಯ ತೆಗೆದುಕೊಳ್ಳಲು ಮುಂದಾಯಿತು. ಅದರಂತೆ, 2019ರ ಆ.5ರಂದು ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ರದ್ದು ಮಾಡುವ ನಿರ್ಣಯವನ್ನು ಮಂಡಿಸಿದರು. ಬಿರುಸಿನ ಚರ್ಚೆಯ ಬಳಿಕ ಅದಕ್ಕೆ ಅನುಮೋದನೆಯೂ ಸಿಕ್ಕಿತು.
Related Articles
Advertisement
ಗಳಲ್ಲಿ ಆಗಿರುವ ಜನಪರ-ಜನಹಿತ ಕೆಲಸ- ಕಾಮಗಾರಿಗಳತ್ತ ಪಕ್ಷಿನೋಟ ಬೀರೋಣ. ಕೇಂದ್ರಾಡಳಿತ ಪ್ರದೇಶದಲ್ಲಿ ಶೇ.100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರಧಾನಮಂತ್ರಿ ಸಹಜ ಬಿಜಿಲಿ ಹರ್ ಘರ್ ಯೋಜನೆ (ಸೌಭಾಗ್ಯ) ವ್ಯಾಪ್ತಿಯಲ್ಲಿ ಈ ಸಾಧನೆ ಮಾಡಲಾಗಿದೆ. ಗಮನಿಸಿ, ಈ ಸಾಧನೆಯಾದದ್ದು ವಿಶೇಷ ಮಾನ್ಯತೆ ರದ್ದು ಮಾಡಿ ಅನತಿ ಸಮಯದಲ್ಲೇ. ಈ ಬಗ್ಗೆ 2018ರ ನ.31ರಂದು ಆ ಸಂದರ್ಭದಲ್ಲಿ ಕೇಂದ್ರ ಇಂಧನ ಖಾತೆ ಸಹಾಯಕ ಸಚಿವರಾಗಿದ್ದ ಆರ್.ಕೆ.ಸಿಂಗ್ ಮಾಹಿತಿ ನೀಡಿದ್ದರು.
ಕುಡಿಯುವ ನೀರು ಪೂರೈಕೆ:
ನೀರು ಎನ್ನುವುದು ಮನುಜ ಕುಲ-ಪ್ರಾಣಿ ಸಂಕುಲಕ್ಕೆ ಬೇಕೇ ಬೇಕು. ಕೇಂದ್ರ ಸರಕಾರದ ಪ್ರಸ್ ಇನ್‌ಫಾರ್ಮೇಶನ್ ಬ್ಯೂರೋ 2020ರ ಡಿ.17ರಂದು ನೀಡಿದ ಮಾಹಿತಿ ಪ್ರಕಾರ ಕೇಂದ್ರಾಡಳಿತ ಪ್ರದೇಶದ ಜಮ್ಮು ಮತ್ತು ಗಂಡೆರ್‌ಬಾಲ್‌ನಲ್ಲಿ ಶೇ.100ರಷ್ಟು ಜನರಿಗೆ ಅಗತ್ಯವಾಗಿರುವ ಕುಡಿಯುವ ನೀರಿನ ಪೂರೈಕೆಯಲ್ಲೂ ಸಾಧನೆ ಮಾಡಲಾಗಿದೆ. 2022ರ ಒಳಗಾಗಿ, ಕೇಂದ್ರಾಡಳಿತ ಪ್ರದೇಶದ ಉಳಿದ ಭಾಗಗಳಿಗೆ ಕೂಡ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ಮೂಲಕ ಶೇ.100ರಷ್ಟು ಸಾಧನೆಯ ಗುರಿಯನ್ನು ಈಗಾಗಲೇ ಹಾಕಿಕೊಳ್ಳ ಲಾಗಿದೆ. ಅಲ್ಲಿ ಒಟ್ಟು 18.17 ಲಕ್ಷ ಮನೆ ಗಳು ಗ್ರಾಮೀಣ ಪ್ರದೇಶ ಗಳಲ್ಲಿವೆ. ಈ ಪೈಕಿ 8.66 ಲಕ್ಷ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾ ಗಿದೆ. ಶೇಕಡಾವಾರು ಲೆಕ್ಕಾ ಚಾರದಲ್ಲಿ 48. ಕೇಂದ್ರ ಸರಕಾರದ “ಜಲ ಜೀವನ್ ಮಿಷನ್’ನ ಅನ್ವಯ ಅದನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
ಪ್ರತೀ ಗ್ರಾಮವನ್ನೂ ಒಂದು ಘಟಕವನ್ನಾಗಿ ಪರಿಗಣಿಸಿ, “ಗ್ರಾಮೀಣ ಕಾರ್ಯ ಯೋಜನೆ (ವಿಎಪಿ) ಅನುಷ್ಠಾನ ಗೊಳಿಸಲಾಗುತ್ತಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಗ್ರಾಮ ಮಟ್ಟದಲ್ಲಿರುವ ನೀರಿನ ಮೂಲಗಳನ್ನು ಹುಡುಕಿ ಅಭಿವೃದ್ಧಿಗೊಳಿಸುವುದು, ಮನೆ ಮನೆಗೆ ನಲ್ಲಿಯ ಮೂಲಕ ನೀರು ಪೂರೈಸಲು ಬೇಕಾದ ಮೂಲ ಸೌಕರ್ಯ, ಅವುಗಳ ನಿರ್ವಹಣೆ ಬಗ್ಗೆ ಉದ್ದೇಶಿಸಲಾಗಿದ್ದು, ಅನುಷ್ಠಾನವೂ ಆಗುತ್ತಿದೆ. ಇದುವರೆಗೆ ಇಂಥ 6,877 ಗ್ರಾಮಗಳಲ್ಲಿ ಇಂಥ ವಿಎಪಿಗಳು ರಚನೆಯಾಗಿವೆ.
ಪ್ರಯೋಗಶಾಲೆಗಳಿಗಾಗಿನ ಮಾನ್ಯತೆ ಮತ್ತು ಪರೀಕ್ಷಾ ಕೇಂದ್ರಗಳ ರಾಷ್ಟ್ರೀಯ ಮಂಡಳಿ (ಎನ್‌ಎಬಿಎಲ್)ಯ ಅನುಮೋದನೆ ಜತೆಗೆ ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದೀಗ ಸೋಂಕಿನ ಪರಿಸ್ಥಿತಿಯಿಂದಾಗಿ ಈ ಯೋಜನೆಯ ಅನುಷ್ಠಾನದಲ್ಲಿ ಕೊಂಚ ವಿಳಂಬವಾಗುತ್ತಿದೆ.
ವಿದೇಶಿ ರಾಜತಾಂತ್ರಿಕರಿಂದಲೂ ಮೆಚ್ಚುಗೆ:
ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಹಲವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರು. ಆ ಶಂಕೆಯನ್ನು ದೂರೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಫೆ.17, 18ರಂದು ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಕೆಲವು ರಾಷ್ಟ್ರಗಳು, ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ (ಒಐಸಿ)ದ ನಾಲ್ಕು ಸದಸ್ಯ ರಾಷ್ಟ್ರಗಳಾಗಿರುವ ಮಲೇಷ್ಯಾ, ಬಾಂಗ್ಲಾದೇಶ, ಸೆನೆಗಲ್ ಮತ್ತು ತಜಿಕಿಸ್ಥಾನಗಳ ಪ್ರತಿನಿಧಿಗಳು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲನೆ ನಡೆಸಿದ್ದರು. ಶ್ರೀನಗರ ಮಹಾನಗರ ಪಾಲಿಕೆ ಮೇಯರ್ ಜುನೈದ್ ಅಝೀಂ ಮಟ್ಟು ವಿದೇಶಿ ರಾಯಭಾರಿಗಳ ನಿಯೋಗದ ಜತೆಗೆ ಮುಕ್ತವಾಗಿ ಬೆರೆತು ಮಾತನಾಡಿದ್ದರು. ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯನ್ನು ಯಶಸ್ವಿಯಾಗಿ ಮುಕ್ತಾಯ ಗೊಳಿಸಿದ್ದ ಬಗ್ಗೆ ಮಟ್ಟು ವಿವರಿಸಿದ್ದರು.
ನಿಯೋಗದಲ್ಲಿದ್ದ ಭಾರತದಲ್ಲಿರುವ ಬೊಲಿವಿಯಾ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಜುವಾನ್ ಜೋಸ್ ಕೋರ್ಟೆಝ್ “ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನು ವುದು ಇದೆ ಎಂಬ ಅಂಶ ನಮಗೆ ಖಚಿತವಾಗಿದೆ. ಇದು ನಿಜಕ್ಕೂ ಸಂತೋಷದಾಯಕ. ಭಾರತ ಸರಕಾರ ಕೈಗೊಂಡಿರುವ ರಾಜಕೀಯ ನಿರ್ಧಾರದಿಂದ ಜನರು ಸಂತೋಷವಾಗಿದ್ದಾರೆ’ ಎಂದು ಹೇಳಿದ್ದರು. ಗಮನಾರ್ಹವೆಂದರೆ, ಫೆಬ್ರವರಿಯಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ್ದು ವಿದೇಶಿ ರಾಯಭಾರಿಗಳ ಮೂರನೇ ನಿಯೋಗ. ಅದಕ್ಕಿಂತಲೂ ಮೊದಲು ಭೇಟಿ ನೀಡಿದ್ದ 2 ನಿಯೋಗಗಳೂ ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೈಗೊಂಡಿದ್ದ ನಿರ್ಧಾರ ಸರಿ ಎಂದೇ ಬಣ್ಣಿಸಿದ್ದವು.
ರಾಜಕೀಯ ಪ್ರಾಬಲ್ಯಕ್ಕೆ ತೆರೆ:
ವಿಶೇಷ ಸ್ಥಾನಮಾನ ಜಾರಿಯಲ್ಲಿದ್ದ ವರ್ಷಗಳಲ್ಲಿ ಅದು ಸ್ಥಳೀಯ ಜನರ ರಾಜಕೀಯ ಆಕಾಂಕ್ಷೆಗಳಿಗೆ ಅಡ್ಡಿಯಾಗಿದ್ದದ್ದು ಹೌದು. ಆಯ್ದ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾರಮ್ಯ ಸಾಧಿಸಿದ್ದವು. ಹೀಗಾಗಿಯೇ, ಯುವ ಸಮುದಾಯದ ನೇತಾರರು, ಜನರ ನಡುವಿನಿಂದ ಉದಯಿಸಿ ಬಂದಿರಲಿಲ್ಲ. ಈಗ ಆ ಸ್ಥಿತಿ ಬದಲಾಗಿದೆ. ಕೇಂದ್ರ ಸರಕಾರ ಅಲ್ಲಿ ವಿಧಾನಸಭೆ ಚುನಾವಣೆ ನಡೆಸಲೂ ಮುಂದಾಗಿದೆ. ಅದಕ್ಕಾಗಿಯೇ ಜು.21ರಂದು ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನೂ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದರು. ಅದರಲ್ಲಿ ಮಾತನಾಡಿದ್ದ ಪ್ರಧಾನಿಯವರು “ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರಗಳ ಮರು ವಿಂಗಡಣಾ ಸಮಿತಿ ವರದಿ ಸಲ್ಲಿಸಿದ ಬಳಿಕ, ಕೇಂದ್ರ ಅದನ್ನು ಪರಿಶೀಲಿ ಸಲಿದೆ. ನಂತರ ಅಲ್ಲಿ ವಿಧಾನ ಸಭೆ ಚುನಾವಣೆ ನಡೆಸಲಾಗು ತ್ತದೆ. ರಾಜ್ಯದ ಸ್ಥಾನಮಾನವನ್ನು ಸೂಕ್ತ ಸಂದರ್ಭದಲ್ಲಿ ಮರು ಸ್ಥಾಪಿಸ ಲಾಗುತ್ತದೆ’ ಎಂದು ಹೇಳಿದ್ದರು.
ಅದಕ್ಕೆ ಪೂರಕವಾಗಿ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಉಪ ಚುನಾ ವಣಾ ಆಯುಕ್ತ ಚಂದ್ರಭೂಷಣ್ ಅವರನ್ನೊಳಗೊಂಡ ಸಮಿತಿ ಜು.9ರ ವರೆಗೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ವಿಧಾನಸಭಾ ಕ್ಷೇತ್ರ, ಜನಸಂಖ್ಯೆ ಮತ್ತು ಇತರ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಈ ಸಮಿತಿ ಮುಂದಿನ ಮಾರ್ಚ್‌ನಲ್ಲಿ ವರದಿ ನೀಡುವ ಸಾಧ್ಯತೆ ಇದೆ. ನಂತರ ವಷ್ಟೇ ಅಲ್ಲಿ ವಿಧಾನಭೆ ಚುನಾವಣೆ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರಕಾರ ಕೈಗೊಂಡಿದ್ದ ಧೈರ್ಯದ ನಿರ್ಣಯಕ್ಕೆ ಸೌದಿ ಅರೇಬಿಯಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗೆ ಪ್ರಕಟಿಸಲಾಗಿರುವ ಸೌದಿ ಗೆಜೆಟ್‌ನಲ್ಲಿ ವಿಶೇಷ ಮಾನ್ಯತೆ ರದ್ದುಗೊಂಡ ಬಳಿಕ ಅಲ್ಲಿ ನಿಜ ಅರ್ಥದ ಅಭಿವೃದ್ಧಿಯ ಕಾರ್ಯಕ್ರಮಗಳು ಹಂತ ಹಂತವಾಗಿ ನಡೆಯುತ್ತಿವೆ ಎಂಬ ಅಂಶವನ್ನು ಉಲ್ಲೇಖೀಸಿರುವುದು ಗಮನಾರ್ಹವೇ ಆಗಿದೆ. ಅದರಲ್ಲಿ ಉಲ್ಲೇಖಗೊಂಡ ಅಂಶದ ಪ್ರಕಾರ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ರಿಯಲ್ ಎಸ್ಟೇಟ್ ನೀತಿಯಂತೆ ಪಾರದರ್ಶಕ ಭೂವ್ಯವಹಾರ ನೀತಿಯಿಂದ ಜಮೀನು ಖರೀದಿ, ವರ್ಗಾವಣೆಗೆ ಸಂಬಂಧಿಸಿದ ನಿಯಮಗಳು ಕ್ಷಿಪ್ರವಾಗಿ ಮತ್ತು ಕ್ರಮಬದ್ಧವಾಗಿ ನಡೆಯಲಿವೆ. ಕೈಗಾರಿಕೆ, ಮೂಲ ಸೌಕರ್ಯ ಕ್ಷೇತ್ರಗಳತ್ತ ಕೂಡ ಹೊಸ ಬೆಳಕು ಚೆಲ್ಲಲಾಗುತ್ತಿದೆ ಎಂದು ಪ್ರಸ್ತಾವ ಮಾಡಲಾಗಿದೆ.
ಲಡಾಖ್‌ನಲ್ಲಿಯೂ ಅಭಿವೃದ್ಧಿ:
ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ರಚಿಸಲಾಗಿರುವ ಮತ್ತೂಂದು ಕೇಂದ್ರಾಡಳಿತ ಪ್ರದೇಶ ಲಡಾಖ್. ಅಲ್ಲಿಯೂ ಹಲವು ಯೋಜನೆಗಳು, ಕಾನೂನುಗಳು ಅನ್ವಯವಾಗುತ್ತಲಿವೆ. ಇತ್ತೀಚೆಗಷ್ಟೇ ಅಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಕೇಂದ್ರ ಸಂಪುಟದಲ್ಲಿ ಅನುಮೋ ದನೆಯನ್ನೂ ನೀಡಲಾಗಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆ- ಗ್ರಾಮೀಣ, ಪ್ರಧಾನಮಂತ್ರಿ ಆವಾಸ್ ಯೋಜನೆ- ನಗರ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳು ಸ್ಥಳೀಯರ ನೆರವಿಗೆ ಬರುತ್ತಿವೆ.
ಕಳೆದ ತಿಂಗಳ 22ರಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಲಡಾಖ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿಯೇ ಏಕೀಕೃತ ನಿಗಮ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಸದ್ಯ ಇಂಥ ನಿಗಮ ಅಥವಾ ಸಂಸ್ಥೆಗಳು ಅಲ್ಲಿ ಇಲ್ಲ. ಹೊಸ ನಿಗಮದ ಮೂಲಕ ಸ್ಥಳೀಯವಾಗಿ ಇರುವ ಕೈಗಾರಿಕೆ, ಉತ್ಪಾದನೆ ಯಾಗುವ ವಸ್ತುಗಳಿಗೆ ಮಾರುಕಟ್ಟೆ ಕಂಡುಕೊಳ್ಳುವುದು ಮತ್ತು ಸ್ಥಳೀಯರಿಗೆ ನೆಮ್ಮದಿಯ ಜೀವನ ಕಲ್ಪಿಸಲು ಈ ಮೂಲಕ ಅಭಿವೃದ್ಧಿಯಲ್ಲಿ ನೆರವಾಗಲು ಅಂಬೆಗಾಲು ಇಡಲು ಆರಂಭಿಸಲಾಗಿದೆ.
ಒಟ್ಟಿನಲ್ಲಿ ಹೇಳುವುದಿದ್ದರೆ ಈ ಎರಡು ವರ್ಷಗಳಲ್ಲಿ ಸಾಧಿಸಿರುವುದು ಅಪಾರ. ಜತೆಗೆ ಈಗಾಗಲೇ ಉಲ್ಲೇಖ ಮಾಡಿರುವಂತೆ ನಿಜ ಅರ್ಥದಲ್ಲಿ ದೇಶದ ಮುಕುಟದ ಮಣಿ ಭರತ ಭೂಮಿಯಲ್ಲಿ ಸೇರ್ಪಡೆಯಾಗಿದೆ.
ಅನ್ವಯವಾಗಿವೆ 890 ಕಾನೂನುಗಳು :
2019ರ ಆ.5ಕ್ಕೆ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ ಇತರ ಭಾಗಗಳಲ್ಲಿ ಜಾರಿಯಾಗುತ್ತಿದ್ದ ಕಾನೂನುಗಳಿಗೆ ಮಾನ್ಯತೆ ಇರಲಿಲ್ಲ. ಆ ಬಳಿಕ ಪರಿಸ್ಥಿತಿ ಬದಲಾಗಿದ್ದು, 890 ಕಾನೂನುಗಳು ಅನ್ವಯವಾಗುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ ) ಕಾಯ್ದೆ 1950, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಕಾಯ್ದೆ 1993, ಪರಿಶಿಷ್ಟ ವರ್ಗ ಮತ್ತು ಸಾಂಪ್ರದಾಯಿಕವಾಗಿ
ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳನ್ನು ಗೌರವಿಸುವುದು) ಕಾಯ್ದೆ 2007, ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗ ಕಾಯ್ದೆ 1992, ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ (ಆರ್‌ಟಿಇ) ಕಾಯ್ದೆ 2009 ಸೇರಿದಂತೆ 170 ಕೇಂದ್ರ ಸರಕಾರದ ಕಾಯ್ದೆಗಳು, ಆರ್‌ಬಿಐ ಮತ್ತು ಮಹಾಲೇಖಪಾಲರ ನಿಯಮಗಳು ಕಾಶ್ಮೀರಕ್ಕೂ ಅನ್ವಯವಾಗಲಾರಂಭಿಸಿವೆ.
80 ಸಾವಿರ ಕೋಟಿ ರೂ. ಬಿಡುಗಡೆ : ಪ್ರಧಾನಮಂತ್ರಿಗಳ ವಿಶೇಷ ಸಲಹೆಯ ಮೇರೆಗೆ 80 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ, ಐಐಟಿ, ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳ ಸ್ಥಾಪನೆ ಮತ್ತು ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಈ ಮೊತ್ತ ವಿನಿಯೋಗವಾಗಲಿದೆ. ಇದರಿಂದಾಗಿ ಅಲ್ಲಿನ ಯುವ ಜನರಿಗೆ ಉತ್ತಮ ಶಿಕ್ಷಣ ದೊರೆಯಲಿದೆ. ಸಂಬಾ ಮತ್ತು ಆವಂತಿಪುರದಲ್ಲಿ ಏಮ್ಸ್ ಸ್ಥಾಪನೆಗೆ ಇದ್ದ ತಕರಾರು ಇತ್ಯರ್ಥಗೊಂಡಿದೆ. ಅನಂತನಾಗ್, ರಜೌರಿ, ಕಥುವಾ ಮತ್ತು ದೋಡಾಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿ ನೀಡಲಾಗಿದೆ. 40 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಪುರ್ ಕಂಡಿ ಅಣೆಕಟ್ಟು ಯೋಜನೆಗೆ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
-ಸದಾಶಿವ ಕೆ.