Advertisement

ಮುಳುಗಡೆ ಜಿಲ್ಲೆ ಬಾಗಲಕೋಟೆಗಿದು ಎಂಟನೇ ಉಪಕದನ

06:40 AM Oct 09, 2018 | Team Udayavani |

ಬಾಗಲಕೋಟೆ: ಮುಳುಗಡೆ ಜಿಲ್ಲೆ ಬಾಗಲಕೋಟೆ ಈವರೆಗೆ ಏಳು ಉಪ ಚುನಾವಣೆ ಕಂಡಿದೆ. ಇದೀಗ ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, 8ನೇ ಉಪಕದನ.

Advertisement

ಅಖಂಡ ವಿಜಯಪುರ ಜಿಲ್ಲೆ ಇದ್ದಾಗ ಆರು ಉಪಚುನಾವಣೆ ಜಿಲ್ಲೆಯಲ್ಲಿ ನಡೆದಿದ್ದವು. 1997ರಲ್ಲಿ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕ ಜಿಲ್ಲೆ ಆದಾಗ ಒಂದು ಕ್ಷೇತ್ರಕ್ಕೆ ಮಾತ್ರ ಉಪಚುನಾವಣೆ ಆಗಿತ್ತು. 2002ರಿಂದ ಜಿಲ್ಲೆಯಲ್ಲಿ ಈವರೆಗೆ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

ಬಾಗಲಕೋಟೆ ಮತ್ತು 2008ರ ಕ್ಷೇತ್ರ ವಿಂಗಡಣೆ ವೇಳೆ ಮೂರು ಕ್ಷೇತ್ರಗಳಲ್ಲಿ ವಿಲೀನವಾದ ಗುಳೇದಗುಡ್ಡ ಹಾಗೂ ಹುನಗುಂದ ಕ್ಷೇತ್ರಕ್ಕೆ ತಲಾ ಎರಡು ಬಾರಿ ಉಪಚುನಾವಣೆ ನಡೆದಿತ್ತು. ರಾಜ್ಯ ರಾಜಕಾರಣದಲ್ಲಿದ್ದ ದಿ.ಬಿ.ಡಿ. ಜತ್ತಿ ಅವರು ಕೇಂದ್ರ ಸೇವೆಗೆ ತೆರಳಿದಾಗ 1970ರಲ್ಲಿ ಜಮಖಂಡಿಗೆ ಒಂದು ಬಾರಿ ಉಪಚುನಾವಣೆ ನಡೆದಿದೆ. ಅಂದಿನ ಉಪಚುನಾವಣೆಯಲ್ಲಿ ಗೆದ್ದಿದ್ದ ಶ್ರೀಶೈಲಪ್ಪ ಅಥಣಿ ಕೇವಲ 72 ಮತಗಳ ಅಂತರದಿಂದ ಗೆದ್ದು ಶಾಸಕರಾದ ಸಂಭ್ರಮದಲ್ಲಿದ್ದರು. ಬೆಳಗ್ಗೆ ಶಾಸಕರಾಗಿ ಪ್ರಮಾಣವಚನ ಪಡೆದರೆ, ಆ ಪದವಿ ಕೇವಲ ಸಂಜೆಯವರೆಗೂ ಮಾತ್ರ ಉಳಿದಿತ್ತು.

ಕಾಲವಾದವರು:
ಜಿಲ್ಲೆಯ ಉಪ ಚುನಾವಣೆಗಳ ಇತಿಹಾಸದಲ್ಲಿ ಜಿ.ಪಿ. ನಂಜಯ್ಯನಮಠ ಸ್ವತಃ ಹುನಗುಂದ ಉಪ ಚುನಾವಣೆಯಲ್ಲಿ ಗೆದ್ದಿದ್ದರು. ಮುಂದೆ ಗುಳೇದಗುಡ್ಡದಲ್ಲಿ ಅವರು ನಿಧನರಾದ ಬಳಿಕ, ಉಪಚುನಾವಣೆ ನಡೆಯಿತು. 1975ರ ಗುಳೇದಗುಡ್ಡ ಉಪ ಚುನಾವಣೆ ಗೆದ್ದಿದ್ದ ಬಿ.ಎಂ. ಹೊರಕೇರಿ ಅವರು, ಮಹದಾಯಿ ಹೋರಾಟದ ಮುಂಚೂಣಿಯಲ್ಲಿದ್ದರು.

ಜಿಲ್ಲೆಯಲ್ಲಿ ಉಪ ಚುನಾವಣೆ ನಡೆದಿದ್ದು ನಿಧನ ಮತ್ತು ರಾಜೀನಾಮೆ ಕಾರಣಗಳಿಂದ. ಎಸ್‌.ಆರ್‌. ಕಂಠಿ, ಎಸ್‌.ಆರ್‌. ಕಾಶಪ್ಪನವರ, ಜಿ.ಪಿ. ನಂಜಯ್ಯಮಠ ಅವರು ನಿಧನರಾದ ಕಾರಣ ಮೂರು ಕ್ಷೇತ್ರಗಳಲ್ಲಿ ಉಪಕದನ ನಡೆದಿದೆ. ಜಮಖಂಡಿಯಲ್ಲಿ ಬಿ.ಡಿ. ಜತ್ತಿ (ಲೆಫ್ಟಿನೆಂಟ್‌ ಜರ್ನರಲ್‌), ಬಾಗಲಕೋಟೆಯ ಅಜಯಕುಮಾರ ಸರನಾಯಕ ಮತ್ತು ಗುಳೇದಗುಡ್ಡದ ಎಚ್‌.ವೈ. ಮೇಟಿ ಅವರು ಲೋಕಸಭೆ ಚುನಾವಣೆಗೆ ನಿಂತು ಗೆದ್ದಿದ್ದರು. ಹೀಗಾಗಿ ಆಯಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದವು.

Advertisement

48 ವರ್ಷಗಳ ಬಳಿಕ:
ಜಮಖಂಡಿ ಕ್ಷೇತ್ರಕ್ಕೆ ಬರೋಬ್ಬರಿ 48 ವರ್ಷಗಳ ಬಳಿಕ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರದಿಂದ 2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ನಿಧರಾದರು. 2018ರ ಮೇ 15ರಂದು ಫಲಿತಾಂಶ ಬಂದ ಬಳಿಕ ಬೆಂಗಳೂರು-ದೆಹಲಿಗೆ ತೆರಳಿದ್ದ ನ್ಯಾಮಗೌಡ, ಮೇ 28ರಂದು ಕ್ಷೇತ್ರಕ್ಕೆ ಮರಳುತ್ತಿದ್ದರು. ಆಗ ತುಳಸಿಗೇರಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. 2ನೇ ಬಾರಿ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಮೊದಲ ಬಾರಿಗೆ ಕ್ಷೇತ್ರಕ್ಕೆ ಮರಳುತ್ತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಬಂದಿತ್ತು. ಸಚಿವರಾಗುವ ಮೊದಲೇ, ವಿಧಿ ಕರೆಸಿಕೊಂಡಿತ್ತು.

ಜಮಖಂಡಿಗೆ ಶ್ರೀಶೈಲಪ್ಪ ಒಂದೇ ದಿನ ಶಾಸಕರಾದ್ರು
1967ರಲ್ಲಿ ಜಮಖಂಡಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದ  ಬಿ.ಡಿ. ಜತ್ತಿ ಅವರು ಲೆಪ್ಟಿನೆಂಟ್‌ ಜರ್ನರಲ್‌ ಆಗಿ ನೇಮಕಗೊಂಡಿದ್ದರು. ಆಗ ಹಲವು ರಾಜಕೀಯ ವಿದ್ಯಮಾನಗಳ ನಡುವೆ ಎರಡು ವರ್ಷಗಳ ಬಳಿಕ 1970ರಲ್ಲಿ ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆಗ ಶ್ರೀಶೈಲಪ್ಪ ಅಥಣಿ ಎಂಬುವವರು 72 ಮತಗಳಿಂದ ಗೆದ್ದಿದ್ದರು. ಸೋಜಿಗದ ಸಂಗತಿ ಅಂದರೆ ಶ್ರೀಶೈಲಪ್ಪ ಅವರು ಬೆಳಗ್ಗೆ 10:30ಕ್ಕೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಂಜೆ 4ಕ್ಕೆ ಸರ್ಕಾರವೇ ವಿಸರ್ಜನೆಯಾಗಿತ್ತು. ಆಗ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲರು ಬಹುಮತ ಇಲ್ಲದೇ ರಾಜೀನಾಮೆ ಕೊಟ್ಟಿದ್ದರು. ವೀರೇಂದ್ರ ಪಾಟೀಲರೊಂದಿಗೆ ಇದ್ದ ಹಲವು ಸಚಿವರು, ಶಾಸಕರು, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹಾಲಿ ಶಾಸಕರು ಸೇರಿದ್ದರು. ಇದರಿಂದ ವೀರೇಂದ್ರ ಪಾಟೀಲರು, ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಒಂದೂವರೆ ವರ್ಷ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವಿತ್ತು.

ನಮ್ಮ ಜಿಲ್ಲೆ ಈವರೆಗೆ ಏಳು ಉಪಚುನಾವಣೆ ಕಂಡಿದೆ. ಈಗ 8ನೇ ಉಪ ಚುನಾವಣೆ ನಡೆಯುತ್ತಿದೆ. ನಮ್ಮ ತಂದೆ ಕ್ಯಾನ್ಸರ್‌ನಿಂದ 1975ರಲ್ಲಿ ನಿಧನರಾದರು. ಆಗ ಗುಳೇದಗುಡ್ಡಕ್ಕೆ ಉಪಚುನಾವಣೆ ನಡೆದಿತ್ತು. 1972ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ತಂದೆ ಜಿ.ಪಿ. ನಂಜಯ್ಯನಮಠ, 18 ಸಾವಿರ ಮತಗಳ ಅಂತರದಿಂದ ಗೆದಿದ್ದರು. ಇದು ಇಡೀ ಉತ್ತರಕರ್ನಾಟಕದಲ್ಲಿ ಆ ಚುನಾವಣೆಯಲ್ಲಿ ಅತಿಹೆಚ್ಚು ಲೀಡ್‌ ಆಗಿತ್ತು. ಮುಂದೆ ನಿಧರಾದರು. ಆಗ ಬಿ.ಎಂ. ಹೊರಕೇರಿ, ಗುಳೇದಗುಡ್ಡ ಕ್ಷೇತ್ರದಿಂದ ಗೆದ್ದಿದ್ದರು.
– ಎಸ್‌.ಜಿ. ನಂಜಯ್ಯನಮಠ, ಮಾಜಿ ಶಾಸಕ

– ಶ್ರೀಶೈಲ ಕೆ. ಬಿರಾದಾರ
 

Advertisement

Udayavani is now on Telegram. Click here to join our channel and stay updated with the latest news.

Next