ವಿಟ್ಲ : ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ,ಕಾಂಗ್ರೆಸ್ ಮುಖಂಡ ಎ ಅಬ್ದುಲ್ ಜಮೀಲ್ ಕರೋಪಾಡಿ ಅವರ ಹತ್ಯೆಗೆ ಸಂಬಂಧಿಸಿ ಶನಿವಾರ 11 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜೇಶ್ ನಾಯಕ್ ಕರೋಪಾಡಿ , ನರಸಿಂಹ ಶೆಟ್ಟಿ ಮಾಣಿ, ಪ್ರಜ್ವಲ್ ಪುತ್ತೂರು, ಪುಷ್ಪರಾಜ್ ಗೌಡ, ರೋಶನ್, ಪುನೀತ್ ಸಚಿನ್, ಸತೀಶ್ ರೈ, ಕೇಶವ ಪ್ರಶಾಂತ್, ವಚನ್ ಬಂಧಿತ ಆರೋಪಿಗಳು.
ವಿಕ್ಕಿ ಶೆಟ್ಟಿ ಪಿತೂರಿಯೆಂದ ಈ ಕೊಲೆ ನಡೆದಿದೆಯೆಂದು ಪೊಲೀಸ್ ಮಹಾನಿರ್ದೇಶಕ ಪಿ ಹರಿಹರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ :ಎಪ್ರಿಲ್ 20 ರಂದು ದುಷ್ಕರ್ಮಿಗಳು ಪಂಚಾಯತ್ ಕಚೇರಿಯಲ್ಲೇ ಜಮೀಲ್ ಅವರನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದರು. ಪ್ರಕರಣದ ತನಿಖೆಗಾಗಿ ಪೊಲೀಸರು 5 ತಂಡಗಳನ್ನು ರಚಿಸಿದ್ದರು.
ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಕರೋಪಾಡಿ ಬಂದ್ ಕರೆಯನ್ನು ಪೊಲೀಸ್ ವರಿಷ್ಠಾಧಿಕಾರಿಯವರ ಭರವಸೆಯ ಹಿನ್ನೆಲೆಯಲ್ಲಿ ಹಿಂದೆಗೆದುಕೊಳ್ಳಲಾಗಿತ್ತು.
ಜಲೀಲ್ ಅವರ ಕರೋಪಾಡಿ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗ ವಹಿಸಿ, ಹಿಂದಿರುಗುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಾರನ್ನು ತಡೆದು ತತ್‌ಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದರು.