Advertisement

ಬಾಂಡ್‌ ಇಲ್ಲದ ಜೇಮ್ಸ್‌!

09:33 AM Dec 29, 2017 | |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಜೇಮ್ಸ್‌ 7′ ಹೊಸ ಸೇರ್ಪಡೆ ಎನ್ನಬಹುದು. ಹೌದು, ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಪ್ರಯತ್ನ. ಈ ಶೀರ್ಷಿಕೆ ಕೇಳಿದೊಡನೆ, “ಜೇಮ್ಸ್‌ ಬಾಂಡ್‌’ ಚಿತ್ರಗಳ ನೆನಪಾಗುವುದುಂಟು. ಆದರೆ, ಇದು ಬಾಂಡ್‌ ಸಿನಿಮಾ ಅಲ್ಲ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಮಿಥುನ್‌ ಚಂದ್ರಶೇಖರ್‌ಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ. ಇತ್ತೀಚೆಗೆ ಚಿತ್ರದ ಎರಡು ಹಾಡುಗಳನ್ನು ಲೋಕಾರ್ಪಣೆ ಮಾಡಿದ ಲಹರಿ ವೇಲು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

Advertisement

ಹಾಗಾದರೆ, ಚಿತ್ರದ ಕಥೆ ಏನು? “ಐವರು ಗೆಳೆಯರು ಮೋಜು ಮಾಡಲೆಂದು ದೂರದ ಒಂದು ಹಳ್ಳಿಯ ಮನೆಗೆ ಹೋಗಿ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಆ ಮನೆಯಲ್ಲಿ ತಮ್ಮ ಗೆಳತಿಯ ಕೊಲೆ ನಡೆದಿರುತ್ತೆ. ಆ ಕೊಲೆ ಮಾಡಿದ್ದು ಯಾರು, ಹೇಗೆ, ಏತಕ್ಕಾಗಿ ಕೊಲೆಯಾಗಿದೆ ಎಂಬದು ಸಸ್ಪೆನ್ಸ್‌. ಆದರೆ, ಆ ಕೊಲೆಯ ಅಪರಾಧಿಯನ್ನು ಜೇಮ್ಸ್‌ 7 ಹೇಗೆ ಪತ್ತೆ ಹಚ್ಚುತ್ತಾನೆ ಅನ್ನೋದು ಸಾರಾಂಶವಂತೆ.

ಈ ಹಿಂದೆ ಹಲವು ಆರ್ಕೇಸ್ಟ್ರಾ (ವಾದ್ಯಗೋಷ್ಠಿ) ನಡೆಸುತ್ತಿದ್ದ ರಾಯಲ್‌ ಅರವಿಂದ್‌ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರೇ “ಜೇಮ್ಸ್‌ 7′ ಆಗಿ ಮೊದಲ ಸಲ ನಟಿಸಿದ್ದಾರೆ. ರಾಯಲ್‌ ಅರವಿಂದ್‌ ಅವರ ಆರ್ಕೇಸ್ಟ್ರಾ ತಂಡದಲ್ಲಿ ಈ ಹಿಂದೆ ಲೋಕೇಶ್‌ಕುಮಾರ್‌ ಆಗಿದ್ದ ಈಗಿನ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಗಾಯಕರಾಗಿ ಗುರುತಿಸಿಕೊಂಡಿದ್ದರಂತೆ. ಇನ್ನು, ಬೆಂಗಳೂರಿನ ಹಲವು ತಾಣಗಳು ಹಾಗು ಎಂ.ಡಿ.ಕೌಶಿಕ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಅರ್ಪಿತಾ, ತೇಜು ಪೊನ್ನಪ್ಪ, ರವಿಕಿರಣ್‌, ಪೃಥ್ವಿ, ವಂದನಾ, ವಿದ್ಯಾ, ರಂಭಾ ಇತರರು ನಟಿಸಿದ್ದಾರೆ. ಎ.ಟಿ.ರವೀಶ್‌ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಂದ್ರು ಬೆಳವಂಗಲ ಮತ್ತು ನಾಗಶೆಟ್ಟಿ ಅವರು ಕ್ಯಾಮೆರಾ ಹಿಡಿದರೆ, ಗೋಪಿ ಸಾಹಸವಿದೆ. ವಿಜಯನಗರ ಮಂಜು ನೃತ್ಯ ನಿರ್ದೇಶಿಸಿದ್ದಾರೆ. ಸುಮಾರು ಒಂದು ಗಂಟೆ ಅವಧಿಯ ಈ ಚಿತ್ರವನ್ನು ಅರವಿಂದ್‌ ಟಾಕೀಸ್‌ ಮೂಲಕ  ಅನಿತಾ ಪಿ ಕುಮಾರ್‌ ಅವರು ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next