ಬೆಂಗಳೂರು: ನಗರದ ಎಂ.ಜಿ.ರಸ್ತೆಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಇದೇ ಮೊದಲ ಬಾರಿಗೆ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಜ್ ಅವರ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ಗಳ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ರಾಜಕೀಯ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಚಲಿತ ಘಟನೆಗಳನ್ನು ಹಾಸ್ಯಭರಿತವಾಗಿ, ವಿಡಂಬನಾತ್ಮಕವಾಗಿ ಹೇಳಿ ಗಮನ ಸೆಳೆದ ಜೇಮ್ಸ್‌ವಾಜ್ ಅವರ ಸುಮಾರು 60 ವ್ಯಂಗ್ಯ ಚಿತ್ರ ಮತ್ತು ವ್ಯಂಗ್ಯಭಾವ ಚಿತ್ರಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
1995ರಿಂದ “ಮಣಿಪಾಲ್ ಮೀಡಿಯಾ ನೆಟ್‌ವರ್ಕ್’ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಜ್ ಅವರು, ಈಗಾಗಲೇ ಶಿವಮೊಗ್ಗ, ಸೊರಬ, ಸಾಗರ, ಕೊಪ್ಪ, ಶೃಂಗೇರಿ, ಕುಂದಾಪುರ, ಮೈಸೂರು, ಭದ್ರಾವತಿ, ಚಂದ್ರಗುತ್ತಿ, ಕಲಬುರಗಿ, ಮೂಡಬಿದ್ರೆ, ಮಣಿಪಾಲ್ ಸೇರಿದಂತೆ ಅನೇಕ ಕಡೆಗಳಲ್ಲಿ ವ್ಯಂಗ್ಯ ಚಿತ್ರ ಪ್ರದರ್ಶನ ನೀಡಿದ್ದಾರೆ. ಜತೆಗೆ ಅನೇಕ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಚಲನಚಿತ್ರ ಹಿರಿಯ ನಟ ಶಿವರಾಂ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ, “ವ್ಯಂಗ್ಯ ಚಿತ್ರ ಮತ್ತು ಚಲನಚಿತ್ರಕ್ಕೂ ಹತ್ತಿರದ ಸಂಬಂಧವಿದೆ. ಸಮಾಜದ ಓರೆಕೋರೆಗಳನ್ನು ವ್ಯಂಗ್ಯಚಿತ್ರದ ಮೂಲಕ ವ್ಯಂಗ್ಯಚಿತ್ರಕಾರರು ಹೇಳುತ್ತಾರೆ. ಚಲನಚಿತ್ರ ಕಲಾವಿದರು ಅದನ್ನು ಅಭಿನಯದ ಮೂಲಕ ಹಾಸ್ಯಪ್ರಧಾನವಾಗಿ ಹೇಳುತ್ತಾರಷ್ಟೇ. ಹಾಸ್ಯ ವ್ಯಂಗ್ಯಚಿತ್ರದಿಂದ ಮೂಡುತ್ತದೆ. ವ್ಯಂಗ್ಯಚಿತ್ರ ಕಲೆಯನ್ನು ಬೆಳೆಸುವ ಅಗತ್ಯವಿದೆ. ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಯುವ ಕಲಾವಿದರುಗಳಿಗೆ ಪ್ರಮುಖ ವೇದಿಕೆ ಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವ್ಯಂಗ್ಯಚಿತ್ರ ಗ್ಯಾಲರಿ ಮತ್ತು ಸರ್ಕಾರ ಜಂಟಿಯಾಗಿ ಕಾರ್ಯೋನ್ಮುಖ ವಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರ ಆರ್ಟ್ ಗ್ಯಾಲರಿಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ, ವ್ಯಂಗ್ಯಚಿತ್ರಕಾರರಾದ ಕೆ.ಆರ್.ಸ್ವಾಮಿ, ಕಾಂತೇಶ್ ಬಡಿಗೇರ್, ಗುಜ್ಜಾರಪ್ಪ, ಜಿ.ಎಸ್.ನಾಗನಾಥ್, ದತ್ತಾತ್ರಿ, ರಘುಪತಿ, ರಾಮಗೋಪಾಲ್ ಮತ್ತಿತರು ಉಪಸ್ಥಿತರಿದ್ದರು.