ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್’ ತೆರೆಕಂಡು ಎಲ್ಲೆದೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ಕಂಡು ಪುನೀತರಾಗಿದ್ದಾರೆ. ಜಗತ್ತಿನಾದ್ಯಂತ ಸುಮಾರು 4 ಸಾವಿರ ಪರದೆಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿ ಜೊತೆಗೆ ಬಾಕ್ಸಾಫೀಸ್ ಕಲೆಕ್ಷನ್ ಮೂಲಕ ದಾಖಲೆ ಬರೆಯುತ್ತಿರುವ “ಜೇಮ್ಸ್’ ವಾರಾಂತ್ಯದ ಟಿಕೆಟ್ ಎಲ್ಲ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಮುಂದಿನ ವಾರ ಕೂಡ ಇದೇ ಬೇಡಿಕೆ ಮುಂದುವರೆಯಲಿದೆ ಎನ್ನಲಾಗುತ್ತಿದೆ.
ಇನ್ನು ಶುಕ್ರವಾರ ಕೂಡ “ಜೇಮ್ಸ್’ ತೆರೆಕಂಡ ರಾಜ್ಯದ ಎಲ್ಲ ಚಿತ್ರಮಂದಿರಗಳು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದವು. ಅದರಲ್ಲೂ ಯುವಕರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಂಡೋಪತಂಡವಾಗಿ ಹರಿದು ಬರುತ್ತಿದ್ದ ದೃಶ್ಯಗಳು ಬಹುತೇಕ ಚಿತ್ರಮಂದಿರಗಳ ಮುಂದೆ ಕಂಡುಬಂದಿತು. ಇನ್ನು ಥಿಯೇಟರ್ ಗಳು ಮಾತ್ರವಲ್ಲದೆ ಕಂಠೀರವ ಸ್ಟುಡಿಯೋ ಬಳಿ ಇರುವ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಕೂಡ ಜನರ ದಂಡೇ ಹರಿದು ಬಂದಿದೆ.
ಸಪ್ತ ಸಾಗರದಾಚೆ “ಜೇಮ್ಸ್’ ಅಬ್ಬರ: ಅಪ್ಪು ಅಭಿಮಾನಿಗಳು ಪ್ರಪಂಚಾದ್ಯಂತ ಇದ್ದು, ಇದೀಗ “ಜೇಮ್ಸ್’ ಏಳು ಸಮುದ್ರಗಳನ್ನು ದಾಟಿ ದೂರದ ಅಮೆರಿಕದಲ್ಲೂ ಧೂಳೆಬ್ಬಿಸಲು ರೆಡಿಯಾಗಿದೆ. ಯುಎಸ್‌ಎನಲ್ಲಿರುವ ಕನ್ನಡ ಮೂಲದ “ಸ್ಯಾಂಡಲ್‌ವುಡ್ ಗೆಳೆಯರ ಬಳಗ’ ಅಮೆರಿಕದಲ್ಲಿ “ಜೇಮ್ಸ್’ ಚಿತ್ರಕ್ಕೆ ಭರ್ಜರಿ ಓಪನಿಂಗ್ ನೀಡಿದೆ. ಅಮೆರಿಕದ 35 ರಾಜ್ಯಗಳಲ್ಲಿ ಹಾಗೂ 75 ನಗರಗಳಲ್ಲಿ “ಜೇಮ್ಸ್’ ರೀಲಿಸ್ ಆಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉತ್ತರ ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕನ್ನಡದ ಚಿತ್ರವೊಂದು ಬಿಡುಗಡೆಯಾಗಿ, ಉತ್ತಮ ರೆಸ್ಪಾನ್ಸ್ ಪಡೆಯುತ್ತಿರುವುದು ಎನ್ನಲಾಗಿದೆ.
ಕ್ಯಾಲಿಪೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಮಾ. 17 ರಂದೇ ಮುಂಜಾನೆ 7.45 ಕ್ಕೆ “ಜೇಮ್ಸ್’ ಮೊದಲ ಪ್ರದರ್ಶನ ಕಂಡಿದ್ದು, ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮಿಚಿಗನ್ ಡೆಟ್ರಾಯಟ್ ಪ್ರದೇಶದಲ್ಲಿ ಗ್ರೂಪ್ ಡಾನ್ಸ್ ಮೂಲಕ ಅಪ್ಪುಗೆ ಗೌರವ ಸಲ್ಲಿಸಲಾಗಿದೆ. ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿ ಪ್ರದೇಶದಲ್ಲಿ “ಜೇಮ್ಸ್ ಜಾತ್ರೆ’ ಸಮಾರಂಭ ಆಯೋಜಿಸಿದ್ದು, ಇಂದು (ಶನಿವಾರ) ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಇನ್ನು ಲಾಸ್ ಎಂಜಲೀಸ್‌ನಲ್ಲಿ ಅಪ್ಪು ನೆನಪಿಗಾಗಿ ನಾಳೆ (ಭಾನುವಾರ) ಕಾರ್ ರ್ಯಾಲಿ ಆಯೋಜಿಸಿದ್ದು, ಚಿತ್ರ ಪದರ್ಶನವು ನೆರವೇರಲಿದೆ. ಚಿಕಾಗೋ, ದಲ್ಲಾಸ್, ಸಿಟೆಲ್ ಮುಂತಾದ ಪ್ರದೇಶಗಳಲ್ಲಿ ಕೂಡ “ಜೇಮ್ಸ್ ಜಾತ್ರೆ” ಜರುಗಲಿದೆ ಎಂದು ಅನಿವಾಸಿ ಕನ್ನಡ ಸಂಘಟನೆಗಳು ತಿಳಿಸಿವೆ.
ದಾಖಲೆಗೆ ಮಾರಾಟವಾದ ರೈಟ್? ಈ ಹಿಂದೆ ಯಶ್ ಅಭಿನಯದ “ಕೆಜಿಎಫ್’ ಸ್ಯಾಟ್ ಲೈಟ್ ರೇಟ್ 6 ಕೋಟಿಗೆ ಬಿಕರಿಯಾಗಿತ್ತು. ಆದರೆ “ಜೇಮ್ಸ್’ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ದಾಖಲೆಯಾಗಿದ್ದು, ಕನ್ನಡ ಹೊರತುಪಡಿಸಿ ಇತರ ಭಾಷೆಗಳಲ್ಲಿ ಕೂಡ ಟಿವಿ ಸ್ಯಾಟ್‌ಲೈಟ್ ಹಕ್ಕು ಮಾರಾಟವಾಗಿದೆ ಎನ್ನುತ್ತಿವೆ ಚಿತ್ರರಂಗದ ಮೂಲಗಳು