ಲಂಡನ್: ಸದ್ಯ ಕ್ರಿಕೆಟಿಗೆ ಗುಡ್‌ಬೈ ಹೇಳುವ ಯಾವುದೇ ಯೋಜನೆ ತನ್ನಲ್ಲಿಲ್ಲ ಎಂಬುದಾಗಿ ಇಂಗ್ಲೆಂಡಿನ ಪ್ರಧಾನ ವೇಗಿ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ.
“ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಯಶಸ್ಸು ಕಾಣಲಿಲ್ಲ ನಿಜ. ನಿರೀಕ್ಷಿಸಿದಂತೆ ಬೌಲಿಂಗ್ ನಡೆಸಲು ನನ್ನಿಂದ ಸಾಧ್ಯವಾಗಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲೇ ಇಷ್ಟೊಂದು ಲಯ ಕಳೆದುಕೊಂಡದ್ದು ಇದೇ ಮೊದಲು. ಹೀಗಾಗಿ ತುಸು ಹತಾಶನಾಗಿದ್ದೆ. ಅಂಗಳದಲ್ಲಿ ನನ್ನನ್ನು ಕಾಣುವಾಗ ಇದು ಗೋಚರಿಸುತ್ತಿತ್ತು’ ಎಂದು ಆ್ಯಂಡರ್ಸನ್ “ಸ್ಕೈ ಸ್ಪೋರ್ಟ್ಸ್’ಗೆ ಪೋಸ್ಟ್ ಮಾಡಿದ ವೀಡಿಯೋ ಒಂದರಲ್ಲಿ ಹೇಳಿದ್ದಾರೆ.
ಪಾಕಿಸ್ಥಾನ ಎದುರಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆ್ಯಂಡರ್ಸನ್ 63 ರನ್ ನೀಡಿ ಕೇವಲ ಒಂದು ವಿಕೆಟ್ ಉರುಳಿಸಿದ್ದರು. ದ್ವಿತೀಯ ಸರದಿಯಲ್ಲಿ ಅವರಿಗೆ ವಿಕೆಟ್ ಲಭಿಸಿರಲಿಲ್ಲ. “ಸೌತಾಂಪ್ಟನ್‌ಗೆ ತೆರಳಿದ ಬಳಿಕ ನನ್ನ ಬೌಲಿಂಗ್ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕಠಿನ ಪ್ರಯತ್ನ ನಡೆಸಲಿದ್ದೇನೆ. ಮುಂದಿನ ಟೆಸ್ಟ್‌ನಲ್ಲಿ ಯಶಸ್ಸು ಕಾಣುವ ವಿಶ್ವಾಸ ಇದೆ’ ಎಂದರು.
“ನನ್ನಲ್ಲಿ ಇನ್ನೂ ವಿಕೆಟ್ ಉರುಳಿಸುವ ಹಸಿವಿದೆ. ಮ್ಯಾಂಚೆಸ್ಟರ್‌ನಂಥ ಇನ್ನಷ್ಟು ಗೆಲುವಿನಲ್ಲಿ ನಾನೂ ಪಾಲುದಾರನಾಗಬೇಕು. ಆದರೆ ಎಲ್ಲರಿಗೂ ಕ್ರೀಡಾ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಕೆಟ್ಟ ಸಮಯ ಎದುರಾಗುವುದು ಸಹಜ’ ಎಂಬುದಾಗಿ ಆ್ಯಂಡರ್ಸನ್ ಹೇಳಿದರು.