Advertisement

ಅಪಾಯದ ಅಂಚಿನಲ್ಲಿ ಜಾಂಬೂರು ಹೊಸ ಸೇತುವೆ

09:36 AM Aug 02, 2019 | sudhir |

ಕುಂದಾಪುರ: ಇನ್ನೇನು ಈ ಗ್ರಾಮದ ಜನರ ಕನಸು ನನಸಾಗುವ ಭರವಸೆಯ ಕಂಗಳು ನೋಡ ನೋಡುತ್ತಿರುವಾಗಲೇ ಆ ಬೆಳಕು ಆರಿಸುವ ದಿನಗಳು ಬಾರದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ಹೊಸದಾಗಿ ಸೇತುವೆ ರಚನೆಯಾಗಿದ್ದರೂ ಅದರ ಸಮೀಪದ ಅಡ್ಡಿ ನಿವಾರಿಸದ ಕಾರಣ ಹೊಳೆ ಮಧ್ಯೆ ಎದ್ದುನಿಂತ ಹೊಚ್ಚ ಹೊಸ ಸೇತುವೆ ಅಪಾಯದಲ್ಲಿದೆ.

Advertisement

ಇಂತಹ ಪರಿಸ್ಥಿತಿ ಇರುವುದು 74ನೇ ಉಳ್ಳೂರು ಗ್ರಾಮದ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶ ಜಾಂಬೂರು ಎಂಬಲ್ಲಿ. ಇಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಸೇತುವೆ, ಅದರ ಪಕ್ಕದಲ್ಲೇ ಹಳೆಯ ವೆಂಟೆಡ್‌ ಡ್ಯಾಂ ಅಥವಾ ಕಿರು ಸೇತುವೆ ಒಡೆಯದೆ ಇರುವುದರಿಂದ, ಹೊಸ ಸೇತುವೆಯಡಿ ನೀರು ಸಲೀಸಾಗಿ ಹೋಗದೆ ಹೊಸ ಸೇತುವೆ ಮೇಲೆ ಹತ್ತಿ ಹೋಗುತ್ತದೆ. ಸೇತುವೆಯ ಎರಡು ಕಡೆ ಇರುವ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡದ ಸಂಬಂಧ ಪಟ್ಟವರು ಹಳೆಯ ವೆಂಟೆಡ್‌ ಡ್ಯಾಂ ಒಡೆಯದೆ ಇದ್ದರೆ, ಹೊಸ ಸೇತುವೆಗೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ.

ಜನರ ಆಸೆ ಈಡೇರಿತು

74ನೇ ಉಳ್ಳೂರು ಗ್ರಾಮದ ಹಲವು ಕುಗ್ರಾಮಗಳಿಗೆ ಸಂಪರ್ಕ ಸುಲಭವಾಗಿದೆ. ಕೋಟೆ ಎಂಬ ಸ್ಥಳದ ಮಹಾಲಿಂಗೇಶ್ವರ ದೇಗುಲ ಸಹಿತ ತೆಂಕೂರು, ಜಾಂಬೂರು, ಗುಂಡ್ರಿ, ಅಬ್ಬಿ ಬೇರುಗಳ ಸುತ್ತ ವಾರಾಹಿ ಮತ್ತು ಸಣ್ಣ ಹೊಳೆ ಹರಿಯುತ್ತಿದ್ದು, ಉಳ್ಳೂರು ತಲುಪಲು ಮೆಟ್ಕಲ್ ಗುಡ್ಡೆ ದಾಟಿ 15 ಕಿ.ಮೀ. ಕ್ರಮಿಸಬೇಕಿತ್ತು. ಈಗ ಸೇತುವೆ ನಿರ್ಮಾಣವಾಗಿದ್ದು ಕೇವಲ 1.5 ಕಿ.ಮೀ. ಕ್ರಮಿಸಿದರೆ ಉಳ್ಳೂರು ತಲುಪುತ್ತದೆ.

ಇನ್ನು ಹತ್ತಿರ ಹತ್ತಿರ…

Advertisement

ಇಲ್ಲಿ ಸುಮಾರು 20ರಿಂದ 30 ಕುಟುಂಬಗಳ ಸುಮಾರು 150 ನಿವಾಸಿಗಳು ವಾಸಿಸುತ್ತಿದ್ದು, ಸೇತುವೆ ಭಾಗ್ಯದಿಂದಾಗಿ ಬಸ್ಸು ಸೇವೆಯೂ ಆರಂಭವಾದರೆ ಅಂಚೆ-ಕಚೇರಿ, ಬ್ಯಾಂಕ್‌, ಗ್ರಾ.ಪಂ. ಕಚೇರಿ, ಗ್ರಾ. ಕರಣಿಕರ ಕಚೇರಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ. ನದಿಗೆ ಕೀಳುಮನೆ ಹೊಂಡ ಅಥವಾ ಅಂಸಾಡಿ ಎಂಬಲ್ಲಿ ಸೇತುವೆ ನಿರ್ಮಿಸಿ ಕೊಡಿ ಎಂಬ ಬೇಡಿಕೆಯಿತ್ತು. ಈ ಕುರಿತು ಉದಯವಾಣಿ 2017ರ ಅ.15ರಂದು ‘ದ್ವೀಪ ಸದೃಶ ಪ್ರದೇಶ: ಕೋಟೆ ಮಹಾಲಿಂಗೇಶ್ವರ ದೇಗುಲಕ್ಕೆ ಸಂಪರ್ಕ ವ್ಯವಸ್ಥೆಯ ಕೊರತೆ’ ಎಂದು ವರದಿ ಮಾಡಿತ್ತು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ವರದಿ ತರಿಸಿ ಜಾಂಬೂರುಗೆ ವಾರಾಹಿ ಬಲದಂಡೆ ಕಾಲುವೆಯ 5ನೇ ಕಿ.ಮೀ.ನ ಅಂಸಾಡಿ ಎಂಬಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸುಮಾರು 32 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 5.5 ಮೀ ಅಗಲದ ಸೇತುವೆಗೆ ಅನುದಾನ ದೊರಕಿಸಿಕೊಟ್ಟರು.

ಸಮಸ್ಯೆಯಿದೆ

ಆದರೆ ಈಗ ಸಮಸ್ಯೆ ತಲೆದೋರಿದೆ. ಮಳೆ ಬರುವ ಮುನ್ನ ಇಂತಹ ಸಮಸ್ಯೆ ಇದೆ ಎಂದು ಸಂಬಂಧಪಟ್ಟವರ ಗಮನಕ್ಕೆ ಬಂದಿಲ್ವೋ ಅಥವಾ ಬಂದಿದ್ದರೂ ನಿರ್ಲಕ್ಷ್ಯ ಮಾಡಿದರೋ ಗೊತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಹೊಸ ಸೇತುವೆ ಪಕ್ಕದಲ್ಲೇ ಹಳೆಯ ವೆಂಟೆಡ್‌ ಡ್ಯಾಂ ಅಥವಾ ಕಿರು ಸೇತುವೆ ಇದೆ. ಇದನ್ನು ಒಡೆಯದೆ ಬಾಕಿಯಿಟ್ಟ ಕಾರಣ ಹೊಸ ಸೇತುವೆಯ ಅಡಿ ಭಾಗದಲ್ಲಿ ಮಳೆ ನೀರು ಸಲೀಸಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಜೋರು ಮಳೆ ಬಂದಾಗ ನದಿ ನೀರು ಹೊಸ ಸೇತುವೆಯ ಮೇಲೆ ಹತ್ತಿ ಹೋಗುತ್ತದೆ. ಕಿಂಡಿ ಅಣೆಕಟ್ಟಿನ ಮೂಲಕ ನೀರು ಸಂಗ್ರಹವಾಗಿ ಸೇತುವೆ ಮೂಲಕ ಹಾದು ಹೋಗುವ ಕಾರಣ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಇದು ಒಂದಲ್ಲ ಒಂದು ದಿನ ಅಪಾಯಕ್ಕೆ ದಾರಿ. ಸಂಪರ್ಕ ರಸ್ತೆ ಕೂಡ ಹೊಂಡಗಳಿಂದ ಆವೃತವಾಗಿ ನಾದುರಸ್ತಿಯಲ್ಲಿದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next