Advertisement

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ತೆರೆ…ಟಾಟಾ ಬೈ ಬೈ ಹೇಳಿದ ವಿದ್ಯಾರ್ಥಿಗಳು

12:07 AM Dec 28, 2022 | Team Udayavani |

ಮೂಡುಬಿದಿರೆ : ಸತತ ಏಳು ದಿನಗಳಿಂದ ಆಳ್ವಾಸ್ ಮೂಡಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಮಂಗಳವಾರದಂದು ವಿದ್ಯುಕ್ತ ತೆರೆ ಬಿದ್ದಿದೆ.

Advertisement

ದೇಶ ವಿದೇಶಗಳಿಂದ ಆಗಮಿಸಿದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ತಂಡಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸೇರಿದಂತೆ ಸಾಂಸ್ಕೃತಿಕ ತಂಡಗಳು ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.

ಸಾಂಸ್ಕೃತಿಕ ಜಾಂಬೂರಿಯ ಕೊನೆಯ ದಿನವಾದ ಮಂಗಳವಾರ ಮುಂಜಾನೆ ಸುಮಾರು ನಲವತ್ತು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಜಾಂಬೂರಿಯಲ್ಲಿ ಪ್ರಮುಖ ಆಕರ್ಷಣೆ: ವಿದ್ಯಾಗಿರಿ ಕ್ಯಾಂಪಸ್ ನೊಳಗೆ ಪ್ರವೇಶಿಸುತ್ತಿದ್ದಂತೆ ಹಲವಾರು ಆಕರ್ಷಣೆಯ ತಾಣಗಳು ಗಮನ ಸೆಳೆಯುತ್ತಿತ್ತು ಅದರಲ್ಲಿ ಫಲಪುಷ್ಪ ಪ್ರದರ್ಶನ, ಕೃಷಿ ಮೇಳ, ಅರಣ್ಯ, ವರ್ಣ ಚಿತ್ರ ಪ್ರದರ್ಶನ, ಕಲಾ ಮೇಳ, ವಿಜ್ಞಾನ ಮೇಳ, ಪುಸ್ತಕ ಬಂಡಾರ, ಆಹಾರ ಮೇಳ,ವಿವಿಧ ಮಳಿಗೆಗಳು, ಮತ್ಸ್ಯ ಸಂಗ್ರಹಾಲಯ ಸೇರಿದಂತೆ ಇನ್ನೂ ಹಲವು ವೇದಿಕೆಗಳು ಜನಾಕರ್ಷಣೆಯ ಕೇಂದ್ರವಾಗಿತ್ತು.

Advertisement

ಪುಸ್ತಕ ಮೇಳ :
ಅಂತಾರಾಷ್ಟ್ರೀಯ ಸೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ – ವಿದೇಶಗಳ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿರುವುದರಿಂದ ಕನ್ನಡ ಪುಸ್ತಕಗಳ ಜೊತೆಗೆ ಇಂಗ್ಲೀಷ್, ಹಿಂದಿ ಭಾಷೆಯ ಖ್ಯಾತ ಬರಹಗಾರರ ,ಹೊಸ ಜನಪ್ರಿಯ ಪುಸ್ತಕಗಳು, ಹಳೆಯ ಕಾದಂಬರಿಗಳು, ಆಧ್ಯಾತ್ಮಿಕ, ವೈಜ್ಞಾನಿಕ ವಿಚಾರವನ್ನೊಳಗೊಂಡ ಕೃತಿ ಗಳು ಹಾಗೂ ಇತರ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳ ಪುಸ್ತಕಗಳೂ ಮಳಿಗೆಯಲ್ಲಿದ್ದವಾದರೂ ಆಳ್ವಾಸ್‌ ಸಾಯನ್ಸ್‌ ಬ್ಲಾಕ್‌ನ ನಾಲ್ಕನೇ ಮಹಡಿಯಲ್ಲಿ ಆಯೋಜಿಸಲಾದ ಪರಿಣಾಮ ಪುಸ್ತಕ ಪ್ರೇಮಿಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ ಎಂದು ಪುಸ್ತಕ ಮಳಿಗೆಯ ಮಾಲೀಕರಾದ ನಾಗರಾಜ್ ಹೇಳಿದರು.

ಬೆದರು ಗೊಂಬೆಯ ಆಕರ್ಷಣೆ
ಕೃಷಿ ಮೇಳದಲ್ಲಿ ಬೆಳೆಸಿದ ತರಕಾರಿ ತೋಟದ ನಡುವೆ ಅಲ್ಲಲ್ಲಿ ಬಿದಿರು ಗೊಂಬೆಗಳನ್ನು ನಿಲ್ಲಿಸಲಾಗಿದ್ದು ಒಂದಕ್ಕೊಂದು ವಿಭಿನ್ನ ರೀತಿಯಲ್ಲಿ ಜನರ ಮನ ಸೆಳೆಯುತ್ತಿತ್ತು.

ಮತ್ಸ್ಯ ಮೇಳದಲ್ಲಿ ಮಲೇರಿಯಾ ತಡೆಗಟ್ಟುವ ಮೀನು :
ಮತ್ಸ್ಯ ಮೇಳದಲ್ಲಿ ವಿವಿಧ ಬಗೆಯ ಮೀನುಗಳನ್ನು ನೋಡಲು ಮೀನು ಪ್ರಿಯರು ಮುಗಿಬಿದ್ದರು. ಇಲ್ಲಿರುವ ಹಲವಾರು ಮೀನಿನಲ್ಲಿ ಒಂದು ಮಾತ್ರ ಬಹಳ ವಿಶೇಷತೆಯನ್ನು ಹೊಂದಿದೆ ಅದೇನೆಂದರೆ ‘ಗಪ್ಪಿಸ್’ ಎಂಬ ಮೀನು ಮನೆಯಲ್ಲಿ ಸಾಕಿದರೆ ಮಲೇರಿಯಾ ರೋಗದಿಂದ ಮುಕ್ತಿಕಾಣಬಹುದಂತೆ, ಅದು ಹೇಗೆಂದರೆ ಮನೆಯಲ್ಲಿರುವ ಸೊಳ್ಳೆಗಳು ಈ ಅಕ್ವೇರಿಯಂ ಬಳಿ ಹೋದರೆ ಈ ಮೀನುಗಳು ಸೊಳ್ಳೆಗಳನ್ನು ತಿನ್ನುತ್ತವೆಯಂತೆ ಇದರಿಂದ ಸೊಳ್ಳೆಗಳ ನಿಯಂತ್ರಣ ಜೊತೆಗೆ ಮಲೇರಿಯಾದಿಂದಲೂ ಮುಕ್ತಿ ಕಾಣಬಹುದು.

ವಿವಿಧ ಜಾತಿಯ ಮೀನುಗಳು :
ಆಸ್ಕರ್ ಮೀನು, ಶಾರ್ಕ್, ಗೋಲ್ಡ್, ಚೆನ್ನಾ, ಗ್ಲೋ ಜೀಬ್ರಾ, ಗಪ್ಪಿಸ್, ವಾಸ್ತು ಮೀನು,ಫೈಟರ್ ಸೇರಿ ಇನ್ನಿತರ ಮೀನುಗಳು ಪ್ರದರ್ಶನದಲ್ಲಿತ್ತು, ಇಲ್ಲಿನ ಮೀನುಗಳ ಬೆಲೆ 50 ರೂ ನಿಂದ 2000 ರೂ. ಬೆಲೆಯ ಮೀನುಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ಜನ ಮೀನು ಕೊಳ್ಳಲು ಬಂದಿದ್ದಾರೆ ಎಂದು ಮಾಲೀಕ ಶಶಿ ಕುಮಾರ್ ಹೇಳಿದ್ದಾರೆ.

ಕೆಲವೊಂದಷ್ಟು ಮಂದಿ ಬಣ್ಣ ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಡಿಯೋ ತೆಗೆದು ಸಂಭ್ರಮಿಸಿದರು.

ಗಮನ ಸೆಳೆದ ಮಡ್ಕ ಸೋಡ:
ಒಂದೆಡೆ ಉರಿ ಬಿಸಿಲು ಮತ್ತೊಂದೆಡೆ ಕಾರ್ಯಕ್ರಮಕ್ಕೆ ಬಂದ ಜನರಿಗೆ ಮಳಿಗೆಗೆ ಸುತ್ತಾಡಬೇಕೆಂಬ ಆಸೆ ಆದರೆ ಈ ಬಿಸಿಲಿನ ಝಳಕ್ಕೆ ತಂಪು ಪಾನೀಯವೊಂದು ಸಾಂಸ್ಕೃತಿಕ ಜಂಬೂರಿಯಲ್ಲಿ ಮಣ್ಣಿನ ಮಡಿಕೆಯಲ್ಲಿ ಮಾಡಿದ ಪಾನೀಯ ಗ್ರಾಹಕರನ್ನು ದಣಿವನ್ನು ಹೋಗಲಾಡಿಸುತ್ತಿತ್ತು.

ಸಣ್ಣ ಮಡಿಕೆಯೊಳಗೆ ಕರಿಮೆಣಸು, ಶುಂಠಿ, ಪುದೀನಾ, ಲಿಂಬೆ, ಹಸಿಮೆಣಸು, ಉಪ್ಪು ಹಾಗೂ ಸಕ್ಕರೆಯನ್ನು ಹಾಕಿ, ಆ ಮಿಶ್ರಣಕ್ಕೆ ಸೋಡಾವನ್ನು ಬೆರೆಸಿ ಕುಡಿಯಲು ನೀಡುತ್ತಿರುವ ದೃಶ್ಯ ಕಂಡುಬಂತು.

ಇಷ್ಟು ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಲ್ಲಿ ವಿವಿಧ ವಿಶೇಷತೆಗಳು ಇರುವುದರಿಂದ ಹೋದಷ್ಟು -ನೋಡಿದಷ್ಟು ಮುಗಿಯುವುದಿಲ್ಲ! ಈ ಮಧ್ಯೆ, ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದು ಇಂದು ಕೊನೆಯ ದಿನವಾದ ಕಾರಣ ಜನರು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಮುಗಿಬೀಳುವುದೂ ಕಂಡುಬಂತು.

ವಿದ್ಯಾರ್ಥಿಗಳಿಂದ ಟಾಟಾ ಬೈ ಬೈ…
ಒಂದು ವಾರದ ಜಾಂಬೂರಿಯ ನೆನಪಿನೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಶಿಕ್ಷಕರ ತಂಡ ಮತ್ತು ಅಧಿಕಾರಿಗಳು ಆಳ್ವಾಸ್‌ ಕಾಲೇಜು ಕ್ಯಾಂಪಸ್‌ನಿಂದ ನಿರ್ಗಮಿಸಿ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next