ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ನಾಡಿಗೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಿದ್ದು, ಮಾಜಿ ಕ್ಯಾಪ್ಟನ್ ಅರ್ಜುನ ತೂಕದಲ್ಲಿ ಮುಂದಿದ್ದಾನೆ.
ಕಾಡಿನಿಂದ ನಾಡಿಗೆ ಆಗಮಿಸಿ ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುವ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ಗುರುವಾರ ಬೆಳಗ್ಗೆ ದನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಆಂಡ್ ಕೋಂ ವೇ ಬಿಡ್ಜ್ ನಲ್ಲಿ ತೂಕದ ಪರೀಕ್ಷೆ ನಡೆಸಲಾಯಿತು. ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ 5725 ಕೆಜಿ ತೂಕವಿದ್ದು ಅತ್ಯಂತ ಬಲಶಾಲಿ ಆನೆಯಾಗಿದ್ದಾನೆ. ಇನ್ನು ಗೋಪಾಲಸ್ವಾಮಿ 5240 ಕೆಜಿ, ಧನಂಜಯ 4800 ಕೆಜಿ ತೂಕವಿದ್ದಾನೆ. ಚಿನ್ನದ ಅಂಬಾರಿ ಹೊರುವ ಹಾಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 4770 ಕೆ.ಜಿ ತೂಕವಿದ್ದು, ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ.
ಇದನ್ನೂ ಓದಿ:ಸತ್ಯ ಏನೆಂದು ನನಗೆ ಗೊತ್ತು, ನನ್ನ ನಿರ್ಣಯಗಳು ಗಟ್ಟಿಯಾಗಿದೆ: ಬದಲಾವಣೆ ವದಂತಿ ಬಗ್ಗೆ ಸಿಎಂ
ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಮಹೇಂದ್ರ 4260 ಕೆಜಿ, ಭೀಮ 3950 ಕೆಜಿ ತೂಕವಿದ್ದಾನೆ. ಹೆಣ್ಣಾನೆಗಳಲ್ಲಿ ಕಾವೇರಿ 3110 ತೂಕವಿದ್ದು, ಚೈತ್ರ 3050, ಲಕ್ಷ್ಮೀ 2920 ಕೆಜಿ ತೂಕವಿದೆ.
ಸಾಮರ್ಥ್ಯ ಪರೀಕ್ಷೆ: ದಸರಾ ಮಹೋತ್ಸವದಲ್ಲಿ ಜಂಬೂಸವಾರಿ, ವಾದ್ಯದ ಗಾಡಿ ಸೇರಿದಂತೆ ಇನ್ನಿತರ ತೂಕದ ವಸ್ತುಗಳನ್ನು ಹೊತ್ತು ಸಾಗುವ ಆನೆಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡಗೊಳಿಸಲು ಅರಣ್ಯ ಇಲಾಖಾ ಅಧಿಕಾರಿಗಳು ದಿನನಿತ್ಯ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ತಾಲಿಮು ನಡೆಸುತ್ತಾರೆ. ದೈಹಿಕವಾಗಿ ಸಬಲವಾಗಿದ್ದರೆ ಕಾರ್ಯಕ್ರಮಗಳು ಸುಗಮವಾಗಿ ಸಾಗುತ್ತವೆ. ಈ ಹಿನ್ನೆಲೆಯಲ್ಲಿ ಆನೆಗಳ ತೂಕ ಹಾಗೂ ಆರೋಗ್ಯದ ತಪಾಸಣೆ ನಡೆಸಿ ಸಮಸ್ಯೆಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಶಕ್ತಿ ಬರುವಂತೆ ತಯಾರು ಮಾಡಲಾಗುತ್ತದೆ. ಅದರಂತೆ ಆ.15ರ ನಂತರ ತಾಲೀಮು ಆರಂಭವಾಗಿದ್ದು ವಿಶೇಷ ಭಕ್ಷ್ಯವನ್ನೂ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಡಿಸಿಎಫ್ ಕರಿಕಾಳನ್ ಸೇರಿದಂತೆ ಮಾವುತರು ಹಾಜರಿದ್ದರು.