Advertisement
ಜಮಖಂಡಿ: ಅವತ್ತ ಬುಧವಾರ ರಾತ್ರಿ ಇತ್ರಿ. ನೀರು ಜಾಸ್ತಿ ಬರಬಹುದು, ನೀವು ಮನಿ ಖಾಲಿ ಮಾಡಬೇಕ್ರಿ ಅಂತ ಪಂಚಾಯಿತಿಯವರು ಹೇಳಿದ್ರು. ಒಮ್ಮೀ ನೀರ್ ಬಂದಿಲ್ಲ. ಮೇಲಾಗಿ ನಮ್ಮೂರಾಗ್ ಮಳಿನೂ ಆಗಿಲ್ಲ. ನೀರೆಲ್ಲಿ ಬರ್ತೈತಿ ಅನ್ಕೊಂಡು ಸುಮ್ನಿದ್ವಿ. ಗುರುವಾರ ಸಂಜಿಮುಂದ್ ಮನಿ ಮುಂದ್ ನೀರ್ ಬಂತು. ಮ್ಯಾಳಿಗಿ ಮ್ಯಾಗ್ ಹತ್ತಿ ಕುಂತ್ವಿ. ಎರಡ್ ತಾಸ್‌ನಾಗ್ ನೀರ ಹೊಕ್ಕದ್ ಅನ್ಕೊಂಡ್ವಿ. ಮ್ಯಾಳಗಿ ಮ್ಯಾಗೂ ನೀರು ಬಂತು. ಈಜಾಡಿ ಊರಗ್ ಹೊರಗ ಬರ್ಲಾಕ್ ಹತ್ತೇವು. ನೀರ್ ಹೆಚ್ಚಿಗೇ ಆಗ್ಲಾಕ್ ಹತ್ತಿತ್ತು. ನಾವೇನ್ ಬದುಕಿ ಹೊಳ್ಳಿ ಊರಿಗಿ ಬರಾಂಗಿಲ್ ಅನ್ಕೊಂಡ್ವಿ. ಆದ್ರ ದೇವ್ರ ದೊಡ್ಡಾವ್. ನಾವೆಲ್ಲ ಉಳಿದೇವು. ಸಾಮಾನ್ ಹಾಳಾದ್ರ ಮತ್ ತಗೋಬಹುದು. ಜೀವಾ ಎಲ್ಲಿ ತಗೊಳ್ಳೋದ್ರಿ…
Related Articles
Advertisement
ಬೀದಿಯಲ್ಲೇ ಬದುಕು: ತಾಲೂಕಿನ ಸುಮಾರು 27ಕ್ಕೂ ಹೆಚ್ಚು ಹಳ್ಳಿಗಳು ಸದ್ಯ ಸಂಕಷ್ಟ ಅನುಭವಿಸಿವೆ. ಪ್ರತಿ ವರ್ಷ ಎಷ್ಟೇ ನೀರು ಬಂದರೂ ತಾಲೂಕಿನ ಕನಿಷ್ಠ 16ರಿಂದ 23 ಗ್ರಾಮಗಳ ಸುತ್ತಲೂ ಮಾತ್ರ ನೀರು ಬರುತ್ತಿತ್ತು. ಈ ಬಾರಿ ಮನೆಯ ಮಾಳಿಗೆಯ ಮೇಲೂ ನೀರು ಬಂದಿದ್ದು ಕಂಡ ಹಿರಿಯರೂ, ಇದೆಂತ ನೀರಪ್ಪಾ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ನದಿ ದಂಡಿಯ ಮನೆಗಳಿಗೆ ನೀರು ಬಂದರೆ ಗ್ರಾಮದ ದೇವಸ್ಥಾನ, ಶಾಲೆ, ಅಂಗನವಾಡಿ ಇಲ್ಲವೇ ಎತ್ತರದ ಪ್ರದೇಶಕ್ಕೆ ಹೋಗಿ ಆಶ್ರಯ ಪಡೆದಿದ್ದರು. ಈ ಬಾರಿ ಆಶ್ರಯ ಕೊಡುವ ದೇವಸ್ಥಾನ, ಶಾಲೆಗೂ ನೀರಲ್ಲಿ ಮುಳುಗಿವೆ. ಪ್ರತಿವರ್ಷ ಶ್ರಾವಣದಲ್ಲಿ ಭಕ್ತರಿಯಿಂದ ಮಾಡುತ್ತಿದ್ದ ದೇವರ ಜಾತ್ರೆಗಳು ಈ ಬಾರಿ ನಡೆಯಲಿಲ್ಲ. ಶ್ರಾವಣ ಸಂಭ್ರಮ ಯಾರಿಗೂ ಬರಲಿಲ್ಲ. ಪಂಚಮಿಯ ಉಂಡಿ ತಿಂದು, ಹೆಣ್ಣು ಮಕ್ಕಳಿಗೆ ಕೊಬ್ಬರಿ-ಕುಬಸ ಕೊಟ್ಟು ತಾಯ್ತನ-ಸಹೋದರತ್ವ ಮರೆಯುತ್ತಿದ್ದ ಗ್ರಾಮೀಣರ ಬದುಕು ಈಗ ರಸ್ತೆಗೆ ಬಂದಿದೆ. ರಸ್ತೆಗಳ ಪಕ್ಕದಲ್ಲೇ ಜೋಪಡಿ ಹಾಕಿ, ಬದುಕು ನಡೆಸುತ್ತಿದ್ದಾರೆ. ಇಂತಹ ಕ್ರೂರ ಬದುಕು, ನಮ್ಮ ವೈರಿಗಳಿಗೂ ಬರಬಾರದು ಎನ್ನುತ್ತಾರೆ ಮೈಸೂರಿನ ಸಂತ್ರಸ್ತರು.