ಚೆನ್ನೈ: ಜಲ್ಲಿಕಟ್ಟು ಕ್ರೀಡಾಕೂಟ ಆಯೋಜನೆಗೂ ತಮಿಳುನಾಡು ಸರಕಾರ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಗೂಳಿ ಪಳಗಿಸುವವರು ಸೇರಿ 300 ಜನ ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದು ಕಟ್ಟುನಿಟ್ಟಾಗಿ ಸೂಚಿಸಿದೆ.
ಇದನ್ನೂ ಓದಿ: ಜ.12ರಂದು ತಮಿಳುನಾಡಿನಾದ್ಯಂತ ಪ್ರಧಾನಿಯಿಂದ 11 ಮೆಡಿಕಲ್ ಕಾಲೇಜುಗಳ ಉದ್ಘಾಟನೆ
ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್ ಮೂರನೇ ಅಲೆಯ ಸಂಭಾವ್ಯತೆ ಈ ಆಟದ ಮೆರುಗನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ 48 ಗಂಟೆಗಳ ಕೋವಿಡ್ ನೆಗೆಟಿವ್ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಗೂಳಿ ಪಳಗಿಸುವವರು ಸೇರಿ 300 ಜನರು ಮಾತ್ರ ಪಾಲ್ಗೊಳ್ಳಬೇಕು. ಕ್ರೀಡಾಕೂಟವನ್ನು ವೀಕ್ಷಿಸುವುದಕ್ಕೆ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುವುದು. ಗುಂಪುಗೂಡುವಿಕೆ ಬೇಡ ಎಂದು ಸರಕಾರ ಮನವಿ ಮಾಡಿದೆ.
ಕೆಲ ದಿನಗಳ ಹಿಂದೆ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಕ್ರೀಡಾಕೂಟಕ್ಕೆ ಸ್ಥಳೀಯ ತಳಿಯ ಗೂಳಿಗಳನ್ನು ಬಳಸಬೇಕು. ವಿದೇಶಿ ಹೈಬ್ರಿಡ್ ತಳಿಯ ಗೂಳಿಗಳನ್ನು ಬಳಸಬಾರದು ಎಂದು ಸೂಚನೆ ನೀಡಿತ್ತು.