ಚೆನ್ನೈ:ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧವನ್ನು ಶಾಶ್ವತವಾಗಿ ತೆರವುಗೊಳಿಸಬೇಕು, ಜಲ್ಲಿಕಟ್ಟು ಗೊಂದಲಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಲ್ಲಿಕಟ್ಟು ಪರ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾರೂಪಕ್ಕೆ ತಿರುಗಿದೆ.
ಇಂದು ಬೆಳಗ್ಗೆ ಮರೀನಾ ಬೀಚ್ ಪ್ರದೇಶಕ್ಕೆ ಆಗಮಿಸಿದ್ದ ಸಾವಿರಾರು ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಎಬ್ಬಿಸುವ ಕೆಲಸಕ್ಕೆ ಮುಂದಾದಾಗ ಘರ್ಷಣೆಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಪ್ರಯೋಗ ಮಾಡಿದ್ದರು.
ಪೊಲೀಸರು ಕ್ರಮದಿಂದ ಕೆರಳಿದ ಪ್ರತಿಭಟನಾಕಾರರು ಮರೀನಾ ಬೀಚ್ ಸಮೀಪ ಐಸ್ ಹೌಸ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಕೆಲವು ವಾಹನಗಳಿಗೂ ಬೆಂಕಿಹಚ್ಚಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ನಡೆಸಿದ ಬಲಪ್ರಯೋಗಕ್ಕೆ ಡಿಎಂಕೆ ಆಕ್ರೋಶ ವ್ಯಕ್ತಪಡಿಸಿದೆ. ಚೆನ್ನೈ, ಮದುರೈ, ಕೊಯಮತ್ತೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹನ ಪಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಚೆನ್ನೈನ ಮರೀನಾ ಬೀಚ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಸರ್ಕಾರ ಅಧ್ಯಾದೇಶ ಹೊರಡಿಸುವ ಮೂಲಕ ಜಲ್ಲಿಕಟ್ಟು ಮೇಲಿನ ನಿಷೇಧ ತಾತ್ಕಾಲಿಕವಾಗಿ ತೆರವುಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವಿವಿಧೆಡೆ ಜಲ್ಲಿಕಟ್ಟು ಕ್ರೀಡೆ ನಡೆದಿತ್ತು.
ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ:
ಜಲ್ಲಿಕಟ್ಟು ಕ್ರೀಡೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ ಕಾರಣ, ಚೆನ್ನೈ, ಮದುರೈ ಹಾಗೂ ಕೊಯಮತ್ತೂರಿನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.