ಚೆನ್ನೈ: ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಗಢ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಮಧುರೈನ ಅವನಿಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಒಂದು ಹೋರಿಯೂ ಮೃತಪಟ್ಟಿದೆ ಎನ್ನಲಾಗಿದೆ.
ಅವನಿಪುರಂನ ಸೈಂಟ್ ಅಂಥೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಈ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. ಸಚಿವ ಜೆ. ಭಾಸ್ಕರನ್ ಮತ್ತು ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು.
ಒಟ್ಟು 600ಕ್ಕೂ ಹೆಚ್ಚು ಹೋರಿಗಳು ಕೂಟದಲ್ಲಿ ಭಾಗವಹಿದ್ದವು. ತಮಿಳು ನಾಡಿನ ನಾನಾ ಭಾಗಗಳಿಂದ ಉತ್ಸಾಹಿ ಯುವಕರು ಆಗಮಿಸಿ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಈ ಬಾರಿಯ ಪೊಂಗಲ್ ಗೆ ತಮಿಳುನಾಡಿನ ಮೂರು ಕಡೆ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿತ್ತು. ಮಧುರೈ ಸಮೀಪದ ಅವನಿಪುರಂ, ಪಲಮೇಡು ಮತ್ತು ಅಲಂಕನಲ್ಲೂರಿನಲ್ಲಿ ಜಲ್ಲಿಕಟ್ಟು ನಡೆದಿದೆ.