Advertisement

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಗ್ರಾಮವಿದು ಜಲ್ಲಿಗುಡ್ಡೆ!

06:35 PM Sep 22, 2023 | Team Udayavani |

ಮಹಾನಗರ: ಹದಗೆಟ್ಟ ರಸ್ತೆಗಳು, ಇಲ್ಲದ ಬಸ್‌ ನಿಲ್ದಾಣ, ಹೆಸರಿಗೆ ಮಾತ್ರ ಎನ್ನುವಂತಿರುವ ಬಸ್‌ ತಂಗುದಾಣ, ಇನ್ನೂ ನಿರ್ಮಾಣವಾಗದ ಒಳಚರಂಡಿ… ಇದು ಬಜಾಲ್‌ನ ಜಲ್ಲಿಗುಡ್ಡೆ ಪ್ರದೇಶದ ಸಮಸ್ಯೆಗಳ ಸಾರ.

Advertisement

2002ರಲ್ಲಿ ವಾರ್ಡ್‌ ವಿಸ್ತರಣೆ ಸಂದರ್ಭ ಈ ಪ್ರದೇಶ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು. ಆದರೆ ಹೆಸರಿಗೆ ಮಾತ್ರ ನಗರವಾಗಿ, ಒಳ ಹೊಕ್ಕು ನೋಡಿದರೆ ಕುಗ್ರಾಮದಂತಿದೆ ಈ ಜಲ್ಲಿಗುಡ್ಡೆ ಪ್ರದೇಶ. ಪಾಲಿಕೆ ವ್ಯಾಪ್ತಿಯ ಅತ್ಯಂತ ಕಡೆಗಣಿಸಲ್ಪಟ್ಟ ಪ್ರದೇಶ ಎನ್ನಬಹುದು. ಸಮಗ್ರ ಅಭಿವೃದ್ಧಿಯ ಕುರಿತಂತೆ ಇಲ್ಲಿನ ಜನರ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ವಸತಿ ಇರುವ ಈ ಪ್ರದೇಶವನ್ನು ಕಡೆಗಣಿಸಿರುವ ಬಗ್ಗೆ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜಲ್ಲಿಗುಡ್ಡೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಡಾಮರು ರಸ್ತೆಯಾಗಿದ್ದು, ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಕೂಡಿದೆ. ಒಳ ರಸ್ತೆಗಳ ಕಥೆಯಂತೂ ಇನ್ನೂ ಶೋಚನೀಯವಾಗಿದೆ. ಜಯನಗರವನ್ನು ಸಂಪರ್ಕಿಸುವ ಡಾಮರು ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ದೊಡ್ಡ ದೊಡ್ಡ ಹೊಂಡಗಳಿದ್ದು, ಕನಿಷ್ಠ ಹೊಂಡ ಮುಚ್ಚುವ ಕೆಲಸವೂ ಆಗಿಲ್ಲ. ಪಕ್ಕದ ಬಜಾಲ್‌ ಪ್ರದೇಶ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದು, ಜಲ್ಲಿಗುಡ್ಡೆ ಪ್ರದೇಶವನ್ನು ಕಡೆಗಣಿಸಲಾಗಿದೆ ಎನ್ನುವುದು ಸ್ಥಳೀಯರ ಮಾತು.

ನಗರದಿಂದ ಜಲ್ಲಿಗುಡ್ಡೆಗೆ ಆರು ಬಸ್‌ಗಳು ಟ್ರಿಪ್‌ ಮಾಡುತ್ತವೆ. ಆದರೆ ರಸ್ತೆ ಬದಿಯಲ್ಲಿ ಒಂದು ತಂಗುದಾಣವೂ ಕಂಡು ಬರುವುದಿಲ್ಲ. ಮಳೆ ಬಿಸಿಲಿಗೆ ರಸ್ತೆ ಬದಿಯ ಅಂಗಡಿಗಳ ಮುಂಭಾಗ ಅಥವಾ ರಸ್ತೆಯಲ್ಲೇ ನಿಂತು ಕಾಯಬೇಕಾಗುತ್ತದೆ. ಬಸ್ಸಿನ ಕೊನೆಯ ಸ್ಟಾಪ್‌ ಇರುವಲ್ಲಿ ಬಸ್‌ ನಿಲ್ದಾಣವಿದ್ದು, ಇಲ್ಲಿ ಬಸ್‌ಗಳು ಕೆಲವು ಹೊತ್ತು ನಿಲ್ಲುತ್ತವೆ. ಪ್ರಯಾಣಿಕರಿಗೆ
ಕುಳಿತುಕೊಳ್ಳಲು ಬಸ್‌ಗಳಿಗೆ ತಂಗಲು ಸೂಕ್ತ ವ್ಯವಸ್ಥೆಯಿಲ್ಲ. ಸಣ್ಣ ಮೈದಾನದಂತಹ ಜಾಗದಲ್ಲಿ ಬಸ್‌ಗಳನ್ನು ಚಾಲಕರು ನಿಲ್ಲಿಸುತ್ತಾರೆ.

ಒಳಚರಂಡಿ ಸಂಪರ್ಕವಿಲ್ಲ
ನಗರದ ಪ್ರದೇಶದಲ್ಲಿರಬೇಕಾದ ಪ್ರಮುಖ ಮೂಲ ಸೌಕರ್ಯಗಳಲ್ಲಿ ಒಂದು ಸಮರ್ಪಕ ಒಳಚರಂಡಿ ವ್ಯವಸ್ಥೆ. ಆದರೆ ಜಲ್ಲಿಗುಡ್ಡೆ ಪ್ರದೇಶದಲ್ಲಿ ಇನ್ನೂ ಒಳಚರಂಡಿ ಸೌಲಭ್ಯ ಕಲ್ಪಿಸಲಾಗಿಲ್ಲ. ಮನೆಯವರು ಪಿಟ್‌ ಬಳಸುತ್ತಿದ್ದು, ತುಂಬಿದ ಬಳಿಕ ಅದರ ವಿಲೇವಾರಿಯನ್ನೂ ಅವರೇ ದುಡ್ಡು ಹಾಕಿ ಮಾಡುವಂತಾಗಿದೆ. ಶೀಘ್ರ ಒಳಚರಂಡಿ ಜಾಲವನ್ನು ನಿರ್ಮಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

Advertisement

ಜಲ್ಲಿಗುಡ್ಡೆ ಪ್ರದೇಶದ ಅಭಿವೃದ್ಧಿಗೆ ಬದ್ಧ ಜಲ್ಲಿಗುಡ್ಡೆ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳಡಿ
ಅನುದಾನ ಪಡೆದು ಕೆಲಸ ಮಾಡಲಾಗಿದೆ. ಹದಗೆಟ್ಟಿರುವ ಜಯನಗರದ ಒಳರಸ್ತೆ ಸದ್ಯದಲ್ಲೇ ಡಾಮರು ಹಾಕಲಾಗುವುದು. ಮಳೆ ನಿಂತ ತತ್‌ ಕ್ಷಣ ಈ ಕೆಲಸ ಆರಂಭಿಸಲಾಗುವುದು. ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳದ ಕೊರತೆಯಿದ್ದು, ಸದ್ಯ ಖಾಸಗಿ ಸ್ಥಳದಲ್ಲಿ ಬಸ್‌ಗಳು ತಂಗುತ್ತವೆ. ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲೂ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡಲಾಗುವುದು.
ಅಶ್ರಫ್‌ ಬಜಾಲ್‌, ಕಾರ್ಪೋರೆಟರ್‌

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next