Advertisement

ನೆಕ್ಕರೆಕಾಡು ಕಿಂಡಿ ಅಣೆಕಟ್ಟಿನಲ್ಲಿ ಸಮೃದ್ಧ ಜಲರಾಶಿ

12:14 PM Jan 03, 2021 | Team Udayavani |

ಬಂಟ್ವಾಳ, ಜ. 2: ಮಳೆಗಾಲ ಮುಗಿದು ನದಿ, ಹೊಳೆ, ತೋಡುಗಳಲ್ಲಿ ಹರಿವು ಕ್ಷೀಣಿಸುತ್ತಿದ್ದಂತೆ ಕೃಷಿಗೆ ನೀರುಣಿಸುವುದು ದೊಡ್ಡ ಸವಾಲು. ಆದರೆ ಇಲ್ಲಿ ಆ ಸಮಸ್ಯೆ ಇಲ್ಲ. ಬೇಸಗೆ ಆರಂಭವಾಗುವ ಮುನ್ನ ಊರವರೇ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ, ಮಣ್ಣು ಹಾಕಿ ನೀರು ಸಂಗ್ರಹಿಸಿ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಹೌದು, ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾ.ಪಂ. ವ್ಯಾಪ್ತಿಯ ನೆಕ್ಕರೆ ಕಾಡು ಕಿಂಡಿ ಅಣೆಕಟ್ಟನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದು, ಸಂಗ್ರಹಗೊಳ್ಳುವ ನೀರು ಸುಮಾರು 3.5 ಕಿ.ಮೀ. ವ್ಯಾಪ್ತಿಯ ಕೃಷಿ ಪ್ರದೇಶಕ್ಕೆ ಬಳಸಲಾಗುತ್ತಿದೆ.

1966ರ ಸುಮಾರಿಗೆ ನಿರ್ಮಾಣ ಗೊಂಡ ಕಿಂಡಿ ಅಣೆಕಟ್ಟು ಇದಾಗಿದ್ದು, ಕೊಡಂಗಾಯಿ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅಣೆಕಟ್ಟಿನಲ್ಲಿ 4 ಮೀ. ಆಳದಲ್ಲಿ ನೀರು ಸಂಗ್ರಹವಾಗುತ್ತಿದ್ದು, 13 ಕಿಂಡಿ(ವೆಂಟ್‌)ಗಳ ಮೂಲಕ ನೀರು ನಿಲ್ಲಿಸುತ್ತಿರುವುದರಿಂದ ಸುಮಾರು 5.50 ಲಕ್ಷ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹ ವಾಗುತ್ತದೆ. ಜೂನ್‌ ಬಳಿಕ ಮೇಲಿಂದ ಹಲಗೆಗಳನ್ನು ತೆಗೆಯಲಾಗುತ್ತದೆ.

ಸುಮಾರು 4 ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಹಳೆಯ ಶೈಲಿಯಲ್ಲಿದ್ದು, ಸುಸ್ಥಿತಿಯಲ್ಲಿದೆ. ಕಲ್ಲಿನ ಕಂಬಗಳ ಮೂಲಕ ಅಣೆಕಟ್ಟು ನಿರ್ಮಿಸಲಾಗಿದ್ದು, ಅದರ ಮೇಲಿಂದ ಹೊಳೆ ದಾಟುವುದಕ್ಕೆ ಕಾಲುದಾರಿ ಇದೆ. ಹಲಗೆ ಹಾಗೂ ಮಣ್ಣನ್ನು ಬಳಸಿ ಸ್ಥಳೀಯ ಕೃಷಿಕರು ನೀರನ್ನು ಸಂಗ್ರಹಿಸುತ್ತಾರೆ.  ಪೂರ್ತಿ ನೀರು ಸಂಗ್ರಹಕ್ಕೆ ಹಲಗೆಗಳ ಜತೆಗೆ ತೆಂಗಿನ ದಡೆಗಳನ್ನು ಉಪಯೋಗಿ ಸುತ್ತಾರೆ.  ಜತೆಗೆ ಅಡಿಕೆ ಮರವನ್ನು ಕಡಿದು ಆಧಾರಕ್ಕೆ ಕಂಬವಾಗಿ ಬಳಸಲಾಗುತ್ತಿದೆ.

8 ದಿನ ಮಣ್ಣು  ಹಾಕುವ ಕಾರ್ಯ :

Advertisement

ಸುಮಾರು ಒಂದು ತಿಂಗಳ ಹಿಂದೆ ಕಿಂಡಿ ಅಣೆಕಟ್ಟಿಗೆ ಮಣ್ಣು ಹಾಕಲಾಗಿದ್ದು, 12 ಜನ ಕೆಲಸಗಾರರು 8 ದಿನಗಳಲ್ಲಿ ಮಣ್ಣು ಹಾಕುವ ಕಾರ್ಯ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಸ್ಥಳೀಯ ತೋಟದಿಂದ ಇದಕ್ಕೆ ಮಣ್ಣು ಹಾಕಲಾಗುತ್ತಿತ್ತು. ಈಗ ಟಿಪ್ಪರ್‌ ಮೂಲಕ ಬೇರೆ ಕಡೆಯಿಂದ ಮಣ್ಣು ತಂದು ಹಾಕಲಾಗುತ್ತಿದೆ. ಈ ಅಣೆಕಟ್ಟಿನ ಮೇಲ್ಭಾಗದಲ್ಲಿ ಕೊಳ್ನಾಡಿನ ಬಸ್ತಿಗುಂಡಿಯಲ್ಲಿ ಒಂದು ಅಣೆಕಟ್ಟಿದೆ. ಜತೆಗೆ ಕೆಳಭಾಗದಲ್ಲಿ ಸಾಲೆತ್ತೂರಿನ ಉಳಿಯತ್ತಡ್ಕದಲ್ಲಿ ಮತ್ತೂಂದು ಕಿಂಡಿ ಅಣೆಕಟ್ಟಿದ್ದು, ಅದರ ನೀರು ನೆಕ್ಕರೆಕಾಡು ಅಣೆಕಟ್ಟಿನವರೆಗೆ ಸಂಗ್ರಹಗೊಳ್ಳು ವುದರಿಂದ ಸರಣಿ ಅಣೆಕಟ್ಟಿನ ಮೂಲಕ ನೀರು ಸಂಗ್ರಹಿಸಿದಂತಾಗುತ್ತದೆ.

ನೆಕ್ಕರೆಕಾಡು ಕಿಂಡಿ ಅಣೆಕಟ್ಟಿನಲ್ಲಿ ಸ್ಥಳೀಯರೇ ಆಸಕ್ತಿಯಿಂದ ಹಲಗೆ, ಮಣ್ಣು ಹಾಕುವ ಕಾರ್ಯ ನಿರ್ವಹಿಸುತ್ತಾರೆ. ಸುಮಾರು 3.5 ಕಿ.ಮೀ.ಯಲ್ಲಿ ಹಿನ್ನೀರು ನಿಲ್ಲುತ್ತಿದ್ದು, ಲೆಕ್ಕಾಚಾರದ ಪ್ರಕಾರ 5.50 ಲಕ್ಷ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗುತ್ತದೆ.  ಶಿವಪ್ರಸನ್ನ, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಬಂಟ್ವಾಳ

ಹಲವು ದಶಕಗಳಿಂದ ಕೃಷಿಕರು ಈ ಕಿಂಡಿ ಅಣೆಕಟ್ಟಿನ ಪ್ರಯೋಜನ ಪಡೆಯುತ್ತಿದ್ದು, 17 ವರ್ಷಗಳಿಂದ ನಾನು ಇದರ ಹಲಗೆ ಹಾಕಿ ಮಣ್ಣು ತುಂಬಿಸುವ ಕಾರ್ಯ ನಿರ್ವಹಿಸುತ್ತಿದ್ದೇನೆ. ಜೂನ್‌ವರೆಗೆ ಇಲ್ಲಿ ಹೇರಳ ನೀರಿನ ಸಂಗ್ರಹವಿರುತ್ತದೆ. ಮುಂಗಾರು ಪ್ರವೇಶದ ಬಳಿಕ ನಾವು ಹಲಗೆ ತೆಗೆಯುತ್ತೇವೆ. ಪ್ರಸ್ತುತ ಕಿಂಡಿ ಅಣೆಕಟ್ಟಿನ ಒಂದು ಬದಿ ಸವೆಯುತ್ತಿರುವುದರಿಂದ ಕಾಂಕ್ರೀಟ್‌ ಹಾಕುವುದಕ್ಕೆ ಬೇಡಿಕೆ ಇಟ್ಟಿದ್ದೇವೆ.  ಗೋಪಾಲ ನಾಯ್ಕ ನೆಕ್ಕರೆಕಾಡು, ಕೃಷಿಕರು.

 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next