ವಿಶಾಲವಾಗಿ ಹರಿಯುತ್ತಾ, ವಿಹಂಗಮ ನೋಟದ ಕಾವೇರಿ ನದಿ… ನೋಡಲು ಎಷ್ಟು ಸುಂದರವೋ ಅಷ್ಟೇ ಭಯಾನಕ ಕೂಡ. ಯಾರೇ ಈ ನದಿಗೆ ಇಳಿಯಲಿ, ವಾಪಸ್ ಬರುವಾಗ ಹೆಣವಾಗಿರುತ್ತಾರೆ. ಕೇಳಲು ವಿಚಿತ್ರವೆನಿಸಿದರೂ, ಇದರ ಹಿಂದೊಂದು ಮರ್ಮವಿದೆ. ಕುತಂತ್ರವೂ ಅಡಗಿದೆ. ಎಲ್ಲದಕ್ಕೂ ಕಾರಣ ಈ “ಜಲಂಧರ’.
ನದಿಯ ಸುಳಿಯಲ್ಲಿ ಕೌತುಕದ ಸೆಲೆಯೊಂದನ್ನು ಚಿತ್ರದಲ್ಲಿ ಕಥಾರೂಪವಾಗಿ ಹೇಳಲಾಗಿದೆ. ಇಲ್ಲಿ ಕೆಲವೇ ಪಾತ್ರಗಳಿವೆ, ಹಾಗಾಗಿ ಅವರ ಸುತ್ತವೇ ಕಥೆ ತಿರುಗುತ್ತದೆ. ನದಿಯಲ್ಲಿ ಇಳಿದವರೆಲ್ಲ ಹೇಗೆ ಸಾಯುತ್ತಾರೆ? ಅದು ಸಹಜ ಸಾವೋ? ಕೊಲೆಯೋ? ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಚಿತ್ರದ ಅಂತ್ಯದವರೆಗೆ ಕಾಯಬೇಕು.
ಪೊಲೀಸ್ ಪಾತ್ರಧಾರಿ ನಟ ಪ್ರಮೋದ್ ಶೆಟ್ಟಿ, ಈ ಮಾಯಾಜಾಲವನ್ನು ಬೇಧಿಸಲು ಮುಂದಾಗುತ್ತಾರೆ. ಅದಕ್ಕೊಂದು ಸ್ವಾರ್ಥವಿದೆ, ಬಲವಾದ ಕಾರಣವೂ ಇದೆ. ಸಾವಿನ ತನಿಖೆಯಲ್ಲಿ ಸಿಗುವ ಒಂದೊಂದು ಸುಳಿವೂ ಕಥೆಯನ್ನು ಮತ್ತಷ್ಟು ರೋಚಕಗೊಳಿಸುತ್ತದೆ. ಇಲ್ಲಿ ಕಥೆ ನಡೆಯುವ ವ್ಯಾಪ್ತಿ ಬಹು ಸೀಮಿತ, ಹಾಗಾಗಿ ಎಲ್ಲ ಪಾತ್ರಗಳಿಗೂ ಪ್ರಾಧಾನ್ಯತೆ ಸಿಕ್ಕಿರುವುದು ವಿಶೇಷ.
ಪುರಾಣಗಳ ಪ್ರಕಾರ ಜಲಂಧರ, ಒಬ್ಬ ರಾಕ್ಷಸನ ಹೆಸರು. ಶೀರ್ಷಿಕೆಗೆ ತಕ್ಕಂತೆ ರಾಕ್ಷಸ ಪ್ರವೃತ್ತಿಯ ಪಾತ್ರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಎಲ್ಲೂ ಬೋರ್ ಹೊಡಿಸದೇ ನಿರ್ದೇಶಕ ವಿಷ್ಣು ಪ್ರಸನ್ನ, ಒಂದೊಳ್ಳೆ ಕುತೂಹಲಭರಿತ, ರೋಚಕ ಕಥೆ ಹೇಳಿದ್ದಾರೆ. ಕಥೆಗೆ ಪೂರಕವಾಗಿ ಚಿತ್ರಕಥೆ ಇರುವುದು ಸಿನಿಮಾದ ಪ್ಲಸ್‌ಗಳಲ್ಲಿ ಒಂದು. ನಟ ಪ್ರಮೋದ್ ಶೆಟ್ಟಿಗೆ ಪೊಲೀಸ್ ಪಾತ್ರ ಹೊಸದೇನಲ್ಲ, ಹಾಗಾಗಿ ಅವರ ನಟನೆ ಅಚ್ಚುಕಟ್ಟು. ಸ್ಟೆಪ್ ಅಪ್ ಲೋಕಿ, ಆರೋಹಿತಾ ಗೌಡ, ರುಷಿಕಾ ರಾಜ್ ಅವರ ಪಾತ್ರಗಳು ಗಮನ ಸೆಳೆಯುತ್ತವೆ.
ನಿತೀಶ ಡಂಬಳ