Advertisement

ಮಿತಿ ಮೀರಿದ ಅಕ್ರಮ ಮರಳು ದಂಧೆ

01:11 PM Mar 22, 2020 | Naveen |

ಜಾಲಹಳ್ಳಿ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆದಿದ್ದರೂ ಕಡಿವಾಣ ಹಾಕಬೇಕಾದ ಅಧಿ ಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ತಾಲೂಕಿನಲ್ಲಿ ಎಲ್ಲೆಲ್ಲಿ ಮರಳು ಸಿಗುತ್ತದೆಯೋ ಅಲ್ಲೆಲ್ಲಾ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹ, ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲಿ ಜಾಲಹಳ್ಳಿ ಹೋಬಳಿಯಲ್ಲಂತೂ ಇದು ಮಿತಿಮೀರಿದೆ.

Advertisement

ಕೃಷ್ಣ ನದಿಯಿಂದ ಹಗಲಿರುಳು ಎನ್ನದೇ ರಾಜಾರೋಷವಾಗಿ ಅಕ್ರಮ ಮರಳು ಸಾಗಿಸಲಾಗುತ್ತಿದೆ. ಅ ಧಿಕಾರಿಗಳು ಇದನ್ನು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆ. ಅಕ್ರಮ ಮರಳು ಸಾಗಾಣಿಕೆ ತಡೆಗೆ ಸರಕಾರ ಏನೇ ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಹಾಗೂ ಮರಳು ಮಾಫಿಯಾಗಳ
ಅನೈತಿಕ ಹೊಂದಾಣಿಕೆಯಿಂದ ಅಕ್ರಮ ಮರಳು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದೆ.

ಸರಕಾರದ ಆದೇಶಗಳು ಕಸದ ಬುಟ್ಟಿ ಸೇರಿವೆ. ಕೃಷ್ಣ ನದಿಯಿಂದ ಹೇರುಂಡಿ, ಬಾಗೂರು, ಲಿಂಗದಳ್ಳಿ, ಚಿಂಚೋಡಿ, ಮುದುಗೋಟ, ವೀರಗೋಟ, ಬುಂಕಲದೊಡ್ಡಿ, ನೀಲವಂಜಿ ಗ್ರಾಮಗಳ ಮೂಲಕ ದಿನಾಲು ನೂರಾರು ಟಿಪ್ಪರ್‌, ಟ್ರ್ಯಾಕ್ಟರ್‌ಗಳು ಸರಕಾರಕ್ಕೆ ರಾಜಧನ ಕಟ್ಟದೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಬರಬೇಕಾದ ಲಕ್ಷಾಂತರ ರಾಜಧನ ನಷ್ಟವಾಗುತ್ತಿದೆ. ಆದರೂ ಅಧಿ ಕಾರಿಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲಾ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೃತಕ ಅಭಾವ ಸೃಷ್ಟಿ: ಹಗಲಿನಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಮರಳು ಸಂಗ್ರಹಿಸಿ ರಾತ್ರಿ ಟಿಪ್ಪರ್‌ಗಳಲ್ಲಿ ಹಟ್ಟಿ, ಗುಲ್ಬರ್ಗ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇತರೆಡೆ ಸಾಗಿಸಲಾಗುತ್ತಿದೆ. ಇದರ ಮಾಹಿತಿ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರ ಹಿಂದೆ ಬಲವಾದ ಕೈಗಳು ಕೆಲಸ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ. ಮರಳನ್ನು ಸಂಗ್ರಹಿಸಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾಗಿಸುವ ಉದ್ದೇಶದಿಂದ ಏಜೆಂಟರು ಮರಳಿನ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರಿಗೂ ಮರಳು ಸಿಗದಂತಾಗಿದೆ. ಒಂದು ಟ್ರ್ಯಾಕ್ಟರ್‌
ಮರಳಿಗೆ ಎರಡು-ಮೂರು ಸಾವಿರ ರೂ. ಹೆಚ್ಚು ಹಣ ತೆತ್ತಬೇಕಾಗಿದೆ. ಇನ್ನು ಕೆಲವರು ಮರಳಿನ ದರಕ್ಕೆ ಅಂಜಿ ಮನೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ.

ಅಪಘಾತ ಹೆಚ್ಚಳ: ಅಕ್ರಮವಾಗಿ ಮರಳು ಸಾಗಿಸುವ ಆತುರದಲ್ಲಿ ಚಾಲಕರು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿದ್ದು. ಇದರಿಂದ ಹಲವು ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಮರಳು ಗಾಡಿಗಳ ಭಯದಿಂದ ಮಕ್ಕಳು, ವೃದ್ಧರು, ಮಹಿಳೆಯರು ಜೀವಭಯದಲ್ಲೇ ರಸ್ತೆ ದಾಟುವ ಪರಸ್ಥಿತಿ ನಿರ್ಮಾಣವಾಗಿದೆ. ಇಡೀ ರಾತ್ರಿ ಓಡಾಡುವ ವಾಹನಗಳ ಶಬ್ದಕ್ಕೆ ಲಿಂಗದಳ್ಳಿ, ಹೇರುಂಡಿ, ಬಾಗೂರು, ನಿಲವಂಜಿ ಗ್ರಾಮಗಳ ಜನರಿಗೆ ನಿದ್ದೆ ಇಲ್ಲದಂತಾಗಿದೆ. ವಾಹನಗಳ ಓಡಾಟದಿಂದ ಬರುವ ದೂಳಿನಿಂದ ರಸ್ತೆ ಪಕ್ಕದ ಹೊಲಗಳಲ್ಲಿಯ ಬೆಳೆಗಳು ಹಾಳಾಗಿ ರೈತರು ತೀವ್ರ ನಷ್ಟಕ್ಕೊಳಗಾಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಗಡಿ ಭಾಗದಲ್ಲಿರುವ ಅಕ್ರಮ ಮರಳು ಸಾಗಾಣಿಕೆ ತಡೆಗೆ ಸ್ಥಾಪಿಸಿದ ಚೆಕ್‌ಪೋಸ್ಟ್ ಗಳು ಹೆಸರಿಗೆ ಮಾತ್ರ ಎಂಬಂತಾಗಿವೆ. ಇವು ಅಕ್ರಮ ಮರಳು ಸಾಗಿಸುವುದನ್ನು ಪತ್ತೆ ಹಚ್ಚುವ ಬದಲು ಅವರಿಂದ ಮಾಮೂಲಿ ವಸೂಲಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚೆಗೆ ಕೆಲ ಮರಿ ನಾಯಕರು ಹತ್ತಾರು ಟ್ಯಾಕ್ಟರ್‌ಗಳನ್ನು ಬಾಡಿಗೆ ಪಡೆದು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಅಕ್ರಮ ಮರಳು ಸಾಗಾಣಿಕೆ ತಡೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು.
ಭೀಮಣ್ಣ ಗುಮೇದಾರ,
ಕಾಂಗ್ರೆಸ್‌ ಮುಖಂಡರು ಜಾಲಹಳ್ಳಿ

ಅಕ್ರಮ ಮರಳು ಸಾಗಾಣಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಐದು ಟ್ಯಾಕ್ಟರ್‌ ಒಂದು ಟಿಪ್ಪರ್‌ ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಮರಳು ಸಾಗಾಣಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.
ವಿರೂಪಾಕ್ಷಪ್ಪ,
ಪಿಎಸ್‌ಐ ಜಾಲಹಳ್ಳಿ ಪೊಲೀಸ್‌ ಠಾಣೆ

ಚಂದ್ರಶೇಖರ ನಾಡಗೌಡ

Advertisement

Udayavani is now on Telegram. Click here to join our channel and stay updated with the latest news.

Next