ಲಿಂಗಸುಗೂರು: ನಿಧಿ ತೆಗೆಯುವ ಹುನ್ನಾರ ದೃಷ್ಟಿಯಲ್ಲಿಟ್ಟುಕೊಂಡು ಹರಿಕೆ ತೀರಿಸುವ ನೆಪವೊಡ್ಡಿ ತಾಲೂಕಿನ ಜಲದುರ್ಗ ಐತಿಹಾಸಿಕ ಕೋಟೆಯೊಳಗಿನ ಸಂಗಮೇಶ್ವರ ದೇವಸ್ಥಾನದ ಗದ್ದುಗೆಗೆ ಹಾನಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾವುದೇ ಕೋಟೆ ಕೊತ್ತಲಗಳು ನಿಷೇಧಿತ ವಲಯವಾಗಿದ್ದರಿಂದ ಇಲ್ಲಿ ಯಾವುದೇ ಕೋಟೆಗಳಿಗೆ ಧಕ್ಕೆ ತರುವ ಕೆಲಸ ನಿಷೇಧವಾಗಿದೆ.
ಜಲದುರ್ಗ ಕೋಟೆಯೊಳಗಿನ ಸಂಗಮೇಶ್ವರ ದೇವಸ್ಥಾನದ ಗದ್ದುಗೆಯನ್ನು ಖಾಸಗಿ ವ್ಯಕ್ತಿಗಳು ಜೀರ್ಣೋದ್ಧಾರದ ನೆಪವೊಡ್ಡಿ ಗದ್ದುಗೆ ಹಾಗೂ ಸುತ್ತಲೂ ಗೋಡೆಗಳನ್ನು ಅಗೆಯಲಾಗಿದೆ. ಇದುಲ್ಲದೆ ಗದ್ದುಗೆ ಬಲ ಭಾಗದಲ್ಲಿ ಮೂರು ಅಡಿ ಅಗಲ ಗೋಡೆ ಹೊಡೆದಿದ್ದಾರೆ. ಗದ್ದುಗೆ ಮುಂದಿನ ಭಾಗದಲ್ಲಿ ಕಲ್ಲಿನ ಗೋಡೆ ತೆರವುಗೊಳಿಸಲಾಗಿದೆ. ಗದ್ದುಗೆ ಮೇಲ್ಭಾಗದಲ್ಲಿ ಅಗೆಯಲಾಗಿದೆ.
ಗದ್ದುಗೆಯಲ್ಲಿ ನಿಧಿ ಇದೆ ಎಂಬ ದುರಾಸೆಯಿಂದ ಸಂಗಮೇಶ್ವರನಿಗೆ ಹರಕೆ ತೀರಿಸಲು ಗದ್ದೆಗೆ ಹಾಗೂ ಸುತ್ತಲೂ ಗೋಡೆಗಳಿಗೆ ಪ್ಲಾಸ್ಟರ್ ಹಾಗೂ ಟೈಲ್ಸ್ ಹಾಕುವುದಾಗಿ ದೇವಸ್ಥಾನದ ಅರ್ಚಕ ಕೃಷ್ಣಪ್ಪ ಯಾದವ್ ಅವರಿಂದ ಅನುಮತಿ ಪಡೆದು ಕೆಲಸ ಶುರು ಮಾಡಿದ್ದಾರೆ. ಆದರೆ, ಪ್ರಾಚ್ಯ ವಸ್ತು ಇಲಾಖೆ ಅಧೀನದಲ್ಲಿರುವ ಕೋಟೆ ಸುತ್ತಲೂ ನಿಷೇಧಿತ ವಲಯವಾಗಿದ್ದರಿಂದ ಇಲ್ಲಿ ಭೂಮಿ ಅಗೆಯುವುದು ಅಥವಾ ಇರುವ ಆಸ್ತಿಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಆದರೂ ಗದ್ದುಗೆ ಅಗೆದಿರುವುದು ಕೆಲ ಅನುಮಾನಗಳಿಗೆ ಎಡೆ ಮಾಡಿದೆ.
ಕೋಟೆ ಬಂದೋಬಸ್ತ್ಗಾಗಿ ಇರುವ ಹೋಮ್ ಗಾರ್ಡ್‌ಗಳು ಕಮಾಂಡರ್ ಗಳ ಮೂಲಕ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಘಟನೆ ನಡೆದು ನಾಲ್ಕು ದಿನಗಳಾದರೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಇತಿಹಾಸ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಹಶೀಲ್ದಾರ್, ಸಿಪಿಐ ಭೇಟಿ: ಘಟನೆ ಸುದ್ದಿ ತಿಳಿದು ಶನಿವಾರ ಜಲದುರ್ಗಕ್ಕೆ ದೌಡಾಯಿಸಿದ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಐ ಮಹಾಂತೇಶ ಸಜ್ಜನ್ ಗದ್ದುಗೆ ಪರಿಶೀಲನೆ ನಡೆಸಿ ಅರ್ಚಕ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕಿದೆ ಎಂದು ಸಿಪಿಐ ಮಹಾಂತೇಶ ಸಜ್ಜನ್ ತಿಳಿಸಿದ್ದಾರೆ.