Advertisement

ಜಲಧನ್‌ ಯೋಜನೆ: ಗೊಣ್ಣಿಗನೂರು ದೇಶಕ್ಕೇ ನಂ.1

03:45 AM Mar 09, 2017 | |

ಹುಬ್ಬಳ್ಳಿ: ಅದೊಂದು ಕುಗ್ರಾಮ. ಆದರೆ ಇಂದು ಪ್ರತಿ ಮನೆಗೂ ಶೌಚಾಲಯ, ಅಡುಗೆ ಅನಿಲ ಸಂಪರ್ಕ, ಸೋಲಾರ್‌ ವ್ಯವಸ್ಥೆ, ಮಾದರಿ ಶಾಲೆ ಹೀಗೆ ಹಲವು ಸಾಧನೆಗಳೊಂದಿಗೆ ದೇಶದ ಗಮನ ಸೆಳೆದಿದೆ. ಈ ಮಹತ್ವದ ಸಾಧನೆ ಹಿಂದೆ ನೇತ್ರ ತಜ್ಞರೊಬ್ಬರ ಸಾರ್ಥಕ ಶ್ರಮ, ದಾನಿಗಳ ನೆರವು, ಗ್ರಾಮಸ್ಥರ ಸಹಕಾರ ಇದೆ.

Advertisement

ರಾಷ್ಟ್ರೀಯ ವಾಹಿನಿಯೊಂದು ದೇಶಾದ್ಯಂತ ಜಲಧನ್‌ ಯೋಜನೆಯಡಿ ನಡೆಸಿದ ಸಮೀಕ್ಷೆಯಲ್ಲಿ ಶುದ್ಧ ನೀರು ಮತ್ತು ಶೌಚಾಲಯ ವ್ಯವಸ್ಥೆಯೊಂದಿಗೆ ಮೊದಲ ಸ್ಥಾನ ಪಡೆದಿದೆ. ಅಂದ ಹಾಗೆ ಗ್ರಾಮದ ಹೆಸರು ಗೊಣ್ಣಿಗನೂರು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿದೆ.

ಗೊಣ್ಣಿಗನೂರಿನಲ್ಲಿ ಸುಮಾರು 85 ಮನೆಗಳಿವೆ. ಸಾರ್ಥಕ ಸಾಮಾಜಿಕ ಸೇವೆಗಿಳಿದ ಸಿಂಧನೂರಿನ ನೇತ್ರತಜ್ಞ ಡಾ| ಚನ್ನನಗೌಡ ಆರ್‌.ಪಾಟೀಲ ಚಿಂತನೆಗೆ ಹಲವು ಸ್ನೇಹಿತರು, ದಾನಿಗಳು ಸಾಥ್‌ ನೀಡಿದ್ದಾರೆ.

ತಮ್ಮ ತಂದೆ ದಿ|ರುದ್ರಗೌಡ ಪಾಟೀಲರ ಹೆಸರಲ್ಲಿ ಪ್ರತಿಷ್ಠಾನದ ಮೂಲಕ 2014ರ ಜೂನ್‌ ನಲ್ಲಿ ಗೊಣ್ಣಿಗನೂರು ಗ್ರಾಮದ ಅಭಿವೃದಿಟಛಿಗೆ ಡಾ| ಪಾಟೀಲ ಮುಂದಡಿ ಇರಿಸಿದ್ದರು. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದ್ದರು. ಕೇವಲ 2 ವರ್ಷದಲ್ಲಿ ಗ್ರಾಮದಲ್ಲಿ
ಹಲವು ಸೌಲಭ್ಯಗಳು ಮೈದಳೆದಿವೆ.ದಾನಿಗಳ ನೆರವಿನೊಂದಿಗೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 85 ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯಕ್ಕೆ ಸರಕಾರದ ಧನಸಹಾಯದ ಹಣದಲ್ಲಿ ಸ್ನಾನದ ಕೋಣೆ ನಿರ್ಮಿಸಲಾಗಿದೆ.

ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ನಿಟ್ಟಿನಲ್ಲಿ ಸಿಂಧನೂರಿನ ಶ್ರೀ ಸಿದ್ದಲಿಂಗೇಶ್ವರ ಗ್ಯಾಸ್‌ ಏಜೆನ್ಸಿ ಸಹಾಯದ ಹಸ್ತ ಚಾಚಿದ್ದರು. ಪ್ರತಿ ಮನೆಯಿಂದ ಕೇವಲ 1 ಸಾವಿರ ರೂ. ಮಾತ್ರ ಪಡೆದು, ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಗೊಣ್ಣಿಗನೂರು ರಾಜ್ಯದಲ್ಲೇ ನಾಲ್ಕನೇ ಹೊಗೆ ರಹಿತ ಗ್ರಾಮವಾಗಿ
ಹೊರಹೊಮ್ಮಿದೆ.

Advertisement

ಗ್ರಾಮಕ್ಕೆ ಸೋಲಾರ್‌ ಅಳವಡಿಕೆಗೆ ಯೋಜಿಸಲಾಗಿತ್ತು. ಪ್ರತಿ ಮನೆಗೆ 10 ಸಾವಿರ ರೂ.ವರೆಗೆ ಬೇಕಾಗಿತ್ತು. ಸೆಲ್ಕೋ ಕಂಪೆನಿಯನ್ನು ಸಂಪರ್ಕಿಸಿ ಈ ಬಗ್ಗೆ ವಿವರಿಸಿದಾಗ, ಕಂಪೆನಿಯವರು 3 ಸಾವಿರ ರೂ.ವರೆಗೆ ಕಡಿಮೆ ಮಾಡಲು ಒಪ್ಪಿದ್ದರು. ಗೊಣ್ಣಿಗನೂರು ವ್ಯಾಪ್ತಿಯ ಅಲಬನೂರು ವಿಎಸ್‌ಎಸ್‌ಎನ್‌ ನಿಂದ ಪ್ರತಿಯೊಬ್ಬರಿಗೆ 4 ಸಾವಿರ ರೂ.ಗಳ ಸಾಲ ಲಭ್ಯವಾಗಿತ್ತು. ಉಳಿದ 3 ಸಾವಿರ ರೂ.ಗೆ ಉದ್ಯಮಿಯೊಬ್ಬರು ಒಟ್ಟು 2.20 ಲಕ್ಷ ರೂ.ಗಳ ದೇಣಿಗೆ ನೀಡಿದ್ದರಿಂದ ಒಟ್ಟು 70 ಮನೆಗಳಿಗೆ ಸೋಲಾರ್‌ ಸೌಲಭ್ಯ ಅಳವಡಿಸಲಾಗಿದೆ.

ಶಾಲೆ ಮಾದರಿ: ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸುಮಾರು 150 ಗಿಡಗಳನ್ನು ಬೆಳೆಸಲಾಗಿದ್ದು, ಪರಿಸರ ಸ್ನೇಹಿ ಪ್ರಶಸ್ತಿಗೆ ಭಾಜನವಾಗಿದೆ. ನೆರೆ ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಗ್ರಾಮದ ಶಾಲೆ ಬಿಟ್ಟು ಈ ಶಾಲೆಗೆ ಬರುತ್ತಿದ್ದು, ಶಿಕ್ಷಕ ಕೊಟ್ರೇಶ ಅವರ ಶ್ರಮ ಇದರಲ್ಲಿ ಸಾಕಷ್ಟಿದೆ. ಮಕ್ಕಳಿಗೆ ಅನುಕೂಲವಾಗಲು ಯದ್ದಲದೊಡ್ಡಿಯ ಮಠಾಧೀಶರೊಬ್ಬರು ಉಚಿತ ಹಾಸ್ಟೆಲ್‌ ಆರಂಭಕ್ಕೂ ಯೋಜಿಸಿದ್ದಾರೆ.

24ರಂದು ಪ್ರಶಸ್ತಿ ಪ್ರದಾನ
ಸಿಎನ್‌ಎನ್‌ ವಾಹಿನಿ ಜಲಧನ್‌ ಯೋಜನೆಯಡಿ ದೇಶದ ವಿವಿಧ ಕಡೆ ಗ್ರಾಮಗಳ ಸೌಲಭ್ಯ ಕುರಿತು ಸಮೀಕ್ಷೆ ನಡೆಸಿದೆ. ಇದರಲ್ಲಿ ಸಿಂಧನೂರು ತಾಲೂಕಿನ ಗೊಣ್ಣಿಗನೂರು ಒಂದಾಗಿದೆ. ವಾಹಿನಿಯಲ್ಲಿ ಇಂತಹ ಒಟ್ಟು 30 ಯಶೋಗಾಥೆಗಳು ಪ್ರಸಾರವಾಗಿದ್ದು, ಅದರಲ್ಲಿ ಶುದಟಛಿ ಕುಡಿವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಾರಣಕ್ಕೆ ಗೊಣ್ಣಿಗನೂರು ಮೊದಲ ಸ್ಥಾನ ಪಡೆದಿದೆ.ಮಾ. 24ರಂದು ಮುಂಬಯಿನಲ್ಲಿ ನಡೆಯುವ ಸಮಾರಂಭದಲ್ಲಿ ಡಾ| ಚನ್ನನಗೌಡ ಪಾಟೀಲರನ್ನು ವಾಹಿನಿಯಿಂದ ಸನ್ಮಾನಿಸಲಾಗುತ್ತದೆ.

ಸಾಮಾಜಿಕ ಸೇವೆಯಲ್ಲಿ ತೊಡಗಬೇಕೆಂಬ ತುಡಿತಕ್ಕೆ ಗೊಣ್ಣಿಗನೂರು ವೇದಿಕೆಯಾಯಿತು. ಅಲ್ಲಿನ ಶಿಕ್ಷಕರ ಪ್ರೇರಣೆ ಜತೆಗೆ ಗ್ರಾಮಸ್ಥರ ಸಹಕಾರ, ದಾನಿಗಳ ನೆರವು ಮಹತ್ವದ್ದಾಗಿದೆ. ಗ್ರಾಮದಲ್ಲಿ ಸ್ವಸಹಾಯ ಗುಂಪುಗಳು ರಚನೆಯಾಗಿವೆ. ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸುವುದು ಸೇರಿದಂತೆ ಇನ್ನಷ್ಟು ಚಿಂತನೆಗಳಿವೆ.
– ಡಾ| ಚನ್ನನಗೌಡ ಪಾಟೀಲ, ನೇತ್ರತಜ್ಞ

Advertisement

Udayavani is now on Telegram. Click here to join our channel and stay updated with the latest news.

Next