ಕಲಬುರಗಿ: ನಾವು ಹಚ್ಚುವ ದೀಪಗಳು ಎಣ್ಣೆ ಇರುವ ವರೆಗೂ ಮಾತ್ರ ಉರಿಯುತ್ತದೆ. ಎಣ್ಣೆ ಮುಗಿದ ನಂತರ ಆ ದೀಪ ನಂದಿ ಹೋಗುತ್ತದೆ. ಜ್ಞಾನ ಎನ್ನುವ ದೀಪ ಎಂದಿಗೂ ನಂದುವುದಿಲ್ಲ ಎಂದು ಪ್ರವಚನಕಾರ ಪಂಡಿತ ಬ್ರಹ್ಮಣ್ಯಾಚಾರ್ಯ ಹೇಳಿದರು.
ಜಯತೀರ್ಥ ನಗರದ ಲಕ್ಷಿ ನಾರಾಯಣ ಮಂದಿರದಲ್ಲಿ ಆಯೋಜಿಸಿದ್ದ ವೇದವ್ಯಾಸ ಸೇವಾ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಹೃದಯದಲ್ಲಿ ನಂದಿ ಹೋಗದ ಜ್ಞಾನ ದೀಪವನ್ನು ಹಚ್ಚಿಕೊಂಡು ಸನ್ಮಾರ್ಗದತ್ತ ಸಾಗಬೇಕು. ಎಲ್ಲಿ ಕತ್ತಲೆ ಇರುತ್ತದೆಯೋ ಅಲ್ಲಿ ಕಳ್ಳರ ಕಾಟ ಇರುತ್ತದೆ.
ಬೆಳಕಿದ್ದಲ್ಲಿ ಕಳ್ಳರ ಕಾಟ ಇರುವುದಿಲ್ಲ. ಅದೇ ರೀತಿ ಎಲ್ಲಿ ಅಜ್ಞಾನ ಎಂಬ ಕತ್ತಲೆ ಇರುತ್ತದೆಯೋ ಅಲ್ಲಿ ಕಷ್ಟ, ನೋವುಗಳಿರುತ್ತವೆ. ಜೀವನದಲ್ಲಿ ಬರುವ ಕಷ್ಟ, ನೋವುಗಳನ್ನು ಶಮನ ಗೊಳಿಸುವ ಶಕ್ತಿ ಜ್ಞಾನದ ಬೆಳಕಿಗಿದೆ. ಎಲ್ಲಿ ಜ್ಞಾನದ ಬೆಳಕು ಬೆಳಗುತ್ತಿರುತ್ತದೆಯೋ ಅಲ್ಲಿ ಕಷ್ಟ, ನೋವು ಇರುವುದಿಲ್ಲ ಎಂದರು.
ನಿರಂತರ ಪ್ರವಚನ ಆಯೋಜಿಸುವ ಉದ್ದೇಶದಿಂದ ಜಯತೀರ್ಥ ನಗರದ ನಿವಾಸಿಗಳು ಶ್ರೀ ವೇದವ್ಯಾಸ ಸೇವಾ ಪ್ರತಿಷ್ಠಾನ ಸ್ಥಾಪಿಸಿದ್ದು ಸ್ತುತ್ಯಾರ್ಹ ಎಂದು ಶ್ಲಾಘಿಸಿದರು. ಕಾರ್ಯಕ್ರಮ ನಂತರ ಹಿರಿಯ ವಿದ್ವಾಂಸರಾದ ಗಿರೀಶಾಚಾರ್ಯ ಅವಧಾನಿ ರಾಮಾಯಣದ ಬಾಲಕಾಂಡದ ಕುರಿತು ಪ್ರವಚನ ನೀಡಿದರು.
ಶಾಮ ಸುಂದರ ಕುಲಕರ್ಣಿ ನಿರೂಪಿಸಿದರು, ರವಿ ಲಾತೂರಕರ ವಂದಿಸಿದರು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಬಾಲಕೃಷ್ಣ ಲಾತೂರಕರ, ಅಧ್ಯಕ್ಷ ರಾಮಾಚಾರ್ಯ ಜೋಶಿ ನಗನೂರ, ಪ್ರಮುಖರಾದ ಶ್ರೀನಿವಾಸ ಆಚಾರ್ಯ, ಪ್ರಾಣೇಶ ಮುಜುಂದಾರ್, ಶಶಿಧರ ಜೋಷಿ, ಸುರೇಶ ಕುಲಕರ್ಣಿ, ಅನಿಲ ಕುಲಕರ್ಣಿ, ಸುಬ್ಟಾರಾವ ಕುಲಕರ್ಣಿ, ಧನುಷ್, ಜಡಿ ಸಂಜಯ, ವಿಠuಲ ಕುಲಕರ್ಣಿ, ನರಸಿಂಗರಾವ್ ಕುಲಕರ್ಣಿ, ಛಾಯಾ ಮುಳೂರು, ಜ್ಯೋತಿ ಲಾತೂರಕರ, ರಮಾ ಜೋಶಿ ಇದ್ದರು.