ಮಣಿಪಾಲ: ಮುಂಬರುವ ಜು.1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆಯಿಂದ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳು ನಡೆಸುತ್ತಿರುವ ಕಲ್ಯಾಣ ಮಂಟಪಗಳಿಗೆ ವಿನಾಯಿತಿ ನೀಡಬೇಕೆಂದು ಜಿಎಸ್‌ಬಿ ದೇವಸ್ಥಾನಗಳ ಒಕ್ಕೂಟ ಸಂಸದ ನಳಿನ್ ಕುಮಾರ್ ಕಟೀಲು ಮುಖಾಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಯವರಿಗೆ ಮನವಿ ಮಾಡಿದೆ.
ಕಳೆದ ಮೇ 19ರಂದು ಜರಗಿದ ಜಿಎಸ್‌ಟಿ ಸಭೆಯಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟೆಬಲ್ ಟ್ರಸ್ಟ್‌ಗಳ ಮೇಲೆ ಜಿಎಸ್‌ಟಿ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ, ಈ ಪ್ರಕಾರ ಕಮ್ಯುನಿಟಿ ಹಾಲ್, ಕಲ್ಯಾಣಮಂಟಪ ಅಥವಾ ಓಪನ್ ಏರಿಯಾಗಳ ಬಾಡಿಗೆ ದರ ದಿನಕ್ಕೆ 10,000 ರೂ.ಗಿಂತ ಹೆಚ್ಚಿದ್ದರೆ ಜಿಎಸ್‌ಟಿ ಅನ್ವಯವಾಗುತ್ತದೆ. ದೇವಸ್ಥಾನಗಳೂ ಜಿಎಸ್‌ಟಿ ವ್ಯಾಪ್ತಿಗೊಳಪಡುತ್ತವೆ.
ಚಾರಿಟೆಬಲ್ ಟ್ರಸ್ಟ್‌ಗಳು ಮತ್ತು ದೇವಸ್ಥಾನಗಳು ತಮ್ಮ ಸಭಾಗೃಹ ಅಥವಾ ಕಲ್ಯಾಣ ಮಂಟಪಗಳನ್ನು ಹೆಚ್ಚಾಗಿ ಮದುವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡುತ್ತವೆ. ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವ ಮೂಲಕ ಈ ಟ್ರಸ್ಟ್‌ಗಳು ದೇಶ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಜತೆಗೆ ಜನರಿಗೆ ವಿವಿಧ ರೀತಿಯಲ್ಲಿ ನೆರವನ್ನು ನೀಡುತ್ತಿವೆ ಎಂದು ಒಕ್ಕೂಟ ತನ್ನ ಮನವಿಯಲ್ಲಿ ಹೇಳಿದೆ.
ಇಷ್ಟು ಸಮಯ ಯಾವ ಸರಕಾರವೂ ದೇವಸ್ಥಾನಗಳಿಗೆ ತೆರಿಗೆ ವಿಧಿಸಿರಲಿಲ್ಲ. ಬದಲಾಗಿ ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೆರವಾಗುತ್ತಿದ್ದವು. ಇದೇ ಮೊದಲ ಸಲ ದೇವಸ್ಥಾನಗಳನ್ನು ಸೇವಾ ತೆರಿಗೆ ವ್ಯಾಪ್ತಿಯೊಳಗೆ ತರಲಾಗಿದೆ. ಸಮಾಜ ಸೇವೆಯ ಮೂಲಕ ಮನುಕುಲವನ್ನುದ್ಧರಿಸುವ ಧ್ಯೇಯ ಹೊಂದಿರುವ ದೇವಸ್ಥಾನಗಳಿಗೆ ತೆರಿಗೆ ವಿಧಿಸುವುದು ಸರಿಯಲ್ಲ ಎಂದಿದೆ. ಒಕ್ಕೂಟದ ಅಧ್ಯಕ್ಷ ಸುದರ್ಶನ ಮಲ್ಯ, ಕಾರ್ಯದರ್ಶಿ ಟಿ.ಗಣಪತಿ ಪೈ ಮತ್ತು ಟಿ. ರತ್ನಾಕರ ಪೈ ಮನವಿ ಪತ್ರವನ್ನು ಸಂಸದರಿಗೆ ಅರ್ಪಿಸಿದರು.