ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಕೆನಡಾ ನೇತೃತ್ವದ ಕೋವಿಡ್ ಸ್ಟ್ರ್ಯಾಟಜಿ ಸಭೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಗೈರುಹಾಜರಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ರಾಜತಾಂತ್ರಿಕ ಬಿಕ್ಕಟ್ಟು ನಿಟ್ಟಿನಲ್ಲಿ ಡಿಸೆಂಬರ್ 7ರಂದು ಒಟ್ಟಾವಾದಲ್ಲಿ ನಡೆಯಲಿರುವ ಕೋವಿಡ್ ಸಭೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಗೈರುಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ 19 ಸೋಂಕು ನಿಗ್ರಹ ಹಾಗೂ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕೆನಡಾ ವಿದೇಶಾಂಗ ಸಚಿವ ಫ್ರಾನ್ಸಿಸ್ಕೋ ಫಿಲಿಪ್ ಡಿಸೆಂಬರ್ 7ರಂದು ಸಭೆಯನ್ನು ಆಯೋಜಿಸಿತ್ತು. ಆದರೆ ಜೈಶಂಕರ್ ಈ ಸಭೆಗೆ ಹಾಜರಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಜೈಶಂಕರ್ ಅವರು ಕೆನಡಾ ವಿದೇಶಾಂಗ ಸಚಿವ ಫ್ರಾನ್ಸಿಸ್ಕೋ ನೇತೃತ್ವದ ಮಿನಿಸ್ಟ್ರೀಯಲ್ ಕೋ ಆರ್ಡಿನೇಶನ್ ಗ್ರೂಪ್ ಆಫ್ ಕೋವಿಡ್ 19(ಎಂಸಿಜಿಸಿ) ಸಭೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್ ಅನುಮತಿ
ಭಾರತದಲ್ಲಿನ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಬೆಂಬಲ ಸೂಚಿಸಿ, ಶಾಂತಿಯುತ ಪ್ರತಿಭಟನೆ ನಡೆಸಲಿ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಭಾರತ ಇದು ದೇಶದ ಆಂತರಿಕ ವಿಚಾರ ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಇದೊಂದು ಅನಾವಶ್ಯಕವಾದ ಹೇಳಿಕೆ ಎಂದು ತಿರುಗೇಟು ನೀಡಿತ್ತು. ಇದರಿಂದಾಗಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ.