ನವದೆಹಲಿ: ಪಾಕಿಸ್ತಾನ ಮೂಲದ ಉಗ್ರರ ಸೂಚನೆ ಮೇರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ರಾಷ್ಟ್ರರಾಜಧಾನಿಯಲ್ಲಿರುವ ಉನ್ನತ ಸ್ಥಳಗಳಲ್ಲಿ ಬೇಹುಗಾರಿಕೆ ಮಾಡುವ ಕಾರ್ಯಾಚರಣೆ ಕುರಿತು ಪೊಲೀಸ್ ಕಸ್ಟಡಿಯಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳ ಅವಧಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಗ್ರಾ.ಪಂ ಅಧ್ಯಕ್ಷೆ
ಈ ಮಾಹಿತಿ ಬಹಿರಂಗವಾದ ನಂತರ ಎನ್ ಎಸ್ ಎ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ವಿವರಿಸಿದೆ. ಫೆಬ್ರುವರಿ 6ರಂದು ಬಂಧಿಸಲ್ಪಟ್ಟಿದ್ದ ಜಮ್ಮು-ಕಾಶ್ಮೀರದ ಶೋಪಿಯಾನ್ ನಿವಾಸಿ, ಜೈಶ್ ಉಗ್ರಗಾಮಿ ಸಂಘಟನೆಯ ಹಿದಾಯತ್ ಉಲ್ಲಾ ಮಲಿಕ್ ತನಿಖೆ ಸಂದರ್ಭದಲ್ಲಿ ಎನ್ ಎಸ್ ಎ ವರಿಷ್ಠ ಅಜಿತ್ ದೋವಲ್ ಕಚೇರಿಯ ಬೇಹುಗಾರಿಕೆ ನಡೆಸುವ ಬಗ್ಗೆ ನಿರ್ದೇಶನ ನೀಡಿರುವ ಅಂಶವನ್ನು ಬಯಲುಗೊಳಿಸಿದ್ದಾನೆ.
ಮೂಲಗಳ ಪ್ರಕಾರ, 2019ರ ಮೇ 24ರಂದು ಶ್ರೀನಗರದಿಂದ ವಿಮಾನದಲ್ಲಿ ನವದೆಹಲಿಗೆ ಆಗಮಿಸಿ ಅಜಿತ್ ದೋವಲ್ ಅವರ ಕಚೇರಿಯ ಮತ್ತು ಪ್ರದೇಶ ಹಾಗೂ ಭದ್ರತೆಯ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ಹಿದಾಯತ್ ತನಿಖೆ ವೇಳೆ ವಿವರ ನೀಡಿದ್ದಾನೆ. ಈ ವಿಡಿಯೋವನ್ನು ಹಿದಾಯತ್ ವಾಟ್ಸಪ್ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಗೆ ಕಳುಹಿಸಿದ್ದ ಎಂದು ವರದಿ ತಿಳಿಸಿದೆ.
ಜಮ್ಮು ಮತ್ತು ಅನಂತ್ ನಾಗ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ಮುಸ್ತಾಫಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಿದಾಯತ್ ಉಲ್ಲಾ ಮಲಿಕ್ ನನ್ನು ಫೆಬ್ರುವರಿ 6ರಂದು ಬಂಧಿಸಿದ್ದರು. ಈ ಸಂದರ್ಭದಲ್ಲಿ ಹಿದಾಯತ್ ಬಳಿ ಇದ್ದ ಎರಡು ಪಿಸ್ತೂಲ್, ಗ್ರೆನೇಡ್ಸ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.