ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದ್ದು, ಮಂಗಳವಾರ(ಜೂನ್ 21)ವೂ ಭದ್ರತಾ ಪಡೆಯ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಹತ್ಯೆಗೈದಿದ್ದ ಘಟನೆಯಲ್ಲಿ ಶಾಮೀಲಾಗಿದ್ದ ಉಗ್ರ ಸೇರಿದಂತೆ ಲಷ್ಕರ್ ಎ ತೊಯ್ಬಾದ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದ ಪ್ರಗತಿಗೆ ನರೇಂದ್ರ ಮೋದಿ ಶ್ರೀ ಕೃಷ್ಣನ ಅವತಾರದಲ್ಲಿ ಬಂದಿದ್ದಾರೆ : ರಾಮುಲು
ಬಾರಾಮುಲ್ಲಾದ ಸೋಪೊರೆ ಪ್ರದೇಶದ ಟುಲಿಬಾಲ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿರುವುದಾಗಿ ವರದಿ ವಿವರಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದ ಟುಜ್ಜಾನ್ ಪ್ರದೇಶದಲ್ಲಿನ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, ಟುಜ್ಜಾನ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವ ಓರ್ವ ಉಗ್ರನ ಗುರುತು ಪತ್ತೆಹಚ್ಚಲಾಗಿದೆ.
ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮಜೀದ್ ನಝೀರ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಸಬ್ ಇನ್ಸ್ ಪೆಕ್ಟರ್ ಫಾರೂಖ್ ಅಹ್ಮದ್ ಮೀರ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ನಝೀರ್ ಶಾಮೀಲಾಗಿದ್ದ ಎಂದು ಐಜಿಪಿ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕಳೆದ 40 ಗಂಟೆಗಳಲ್ಲಿ ಐದು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಕನಿಷ್ಠ ಹತ್ತು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಕಳೆದ 18 ದಿನಗಳಲ್ಲಿ 28 ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ನೀಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಅಮರನಾಥ್ ಯಾತ್ರಿಕರಿಗೆ ರಕ್ಷಣೆ ಮತ್ತು ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. 2022ರ ಜನವರಿಯಿಂದ ಈವರೆಗೆ ಕಾಶ್ಮೀರದಲ್ಲಿ 70 ಎನ್ ಕೌಂಟರ್ ಗಳು ನಡೆದಿದೆ. ಇದರಲ್ಲಿ 33 ಪಾಕ್ ಉಗ್ರರು ಸೇರಿದಂತೆ 117 ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.