ಹೊಸದಿಲ್ಲಿ : 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿ ಸೇರಿದಂತೆ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್, ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ, ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಕೊನೆಗೂ ಜಾಗತಿಕ ಉಗ್ರನೆಂದು ಘೋಷಿಸಿದೆ.
ಈ ವರ್ಷ ಫೆ.14ರಂದು ನಡೆದಿದ್ದ ಪುಲ್ವಾಮಾ ಆತ್ಮಾಹುತಿ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಂಟಿಯಾಗಿ ಮಂಡಿಸಿದ್ದವು.
ಪಾಕಿಸ್ಥಾನದ ಮಿತ್ರನಾಗಿರುವ ಚೀನ, ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವಿಗೆ ನಾಲ್ಕು ಬಾರಿ ತಾಂತ್ರಿಕ ನೆಲೆಯಲ್ಲಿ ಅಡ್ಡಗಾಲು ಹಾಕಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ಸಮತಿಯು ಮಸೂದ್ ಅಜರ್‌ನನ್ನು ಅಂತಾರಾಷ್ಟ್ರೀಯಉಗ್ರರ ಪಟ್ಟಿಗೆ ಕೊನೆಗೂ ಸೇರಿಸಿತು. ಇದಕ್ಕೆ ಮೊದಲು ಚೀನ ತಾನು ಈ ನಿಟ್ಟಿನಲ್ಲಿ ಹಾಕಿದ್ದ ತಾಂತ್ರಿಕ ತಡೆಯನ್ನು ತೆರವುಗೊಳಿಸಿತ್ತು.
ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿರುವ ಉಗ್ರ ದಾಳಿಗಳಲ್ಲೇ ಅತ್ಯಂತ ಘೋರ ಎಂದು ತಿಳಿಯಲಾಗಿರುವ ಪುಲ್ವಾಮಾ ಆತ್ಮಾಹುತಿ ದಾಳಿಗೆ ತಾನೇ ಹೊಣೆ ಎಂದು ಮಸೂದ್ ಅಜರ್ ನೇತೃತ್ವದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಘೋಷಿಸಿಕೊಂಡಿತ್ತು.