ಫೆಬ್ರವರಿ 14ರ ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಮಂಗಳವಾರ ನಸುಕಿನ ಜಾವ ಪಾಕಿಸ್ಥಾನದ ಗಡಿಪ್ರದೇಶದೊಳಗೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸಿ ಜೈಶ್ ಸಹಿತ ಇತರ ಸಂಘಟನೆಗಳ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿರುವ ವಿಚಾರ ಇದೀಗ ವಿಶ್ವಪಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇತ್ತ ಪಾಕಿಸ್ಥಾನ ತನ್ನ ಎಂದಿನ ವರಸೆಯಂತೆ ಭಾರತ ನಮ್ಮ ನೆಲದಲ್ಲಿ ಯಾವುದೇ ರೀತಿಯ ದಾಳಿ ಮಾಡಿಲ್ಲ, ಅದು ಸುಳ್ಳು ಹೇಳುತ್ತಿದೆ ಎಂದು ಅಲವತ್ತುಗೊಳ್ಳುತ್ತಿದೆ.
ಆದರೆ ಇತ್ತ ಪಾಕಿಸ್ಥಾನದ ಕೃಪಾಶ್ರಯದಲ್ಲಿರುವ ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಭಾರತ ನಡೆಸಿದ ವಾಯುದಾಳಿಯನ್ನು ಒಪ್ಪಿಕೊಳ್ಳುವ ಮೂಲಕ ತನ್ನ ಆಶ್ರಯದಾತ ರಾಷ್ಟ್ರಕ್ಕೆ ಕಸಿವಿಸಿ ಉಂಟುಮಾಡಿದ್ದಾನೆ. ಬಾಲ್ಕೋಟ್ ನಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ಮಾಡಿರುವುದು ನಿಜ ಆದರೆ ಈ ದಾಳಿಯಿಂದ ಯಾವಿದೇ ರೀತಿಯ ಗಂಭೀರ ಹಾನಿಗಳಾಗಿಲ್ಲ ಎಂದು ಪಾಕಿಸ್ಥಾನದ ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದಾನೆ.
ಈ ವಾಯುದಾಳಿಯಲ್ಲಿ
ಮೌಲಾನ ಅಮ್ಮರ್, ಮೌಲಾನ ತಲ್ಹಾ ಸೈಫ್, ಮುಫ್ತಿ ಅಜ್ಹರ್ ಖಾನ್ ಕಾಶ್ಮೀರಿ ಮತ್ತು ಇಬ್ರಾಹಿಂ ಅಜ್ಹರ್ ಸಹಿತ 300ಕ್ಕೂ ಹೆಚ್ಚು ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೆಳಲಾಗುತ್ತಿದೆ. ಇನ್ನೂ ಒಂದು ಮೂಲಗಳ ಪ್ರಕಾರ ವಾಯುಸೇನೆ ನಡೆಸಿದ ಈ ದಾಳಿಯಲ್ಲಿ ಜೈಶ್ ಸಂಘಟನೆಯ ಈ ಎಲ್ಲಾ ಪ್ರಮುಖ ಉಗ್ರರು ಮೃತರಾಗಿದ್ದಾರೆಯೆ ಎಂಬುದು ದೃಢಪಟ್ಟಿಲ್ಲ. ಉಗ್ರ ತಲ್ಹಾ ಸೈಫ್ ಮೌಲಾನ ಮಸೂದ್ ನ ಸಹೋದರನಾಗಿದ್ದು ಈತ ಉಗ್ರಗಾಮಿ ಕಾರ್ಯಾಚರಣೆಗಳನ್ನು ತಯಾರುಗೊಳಿಸುವ ಘಟಕದ ಮುಖ್ಯಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಅಮ್ಮರ್ ಎಂಬಾತ ಕಾಶ್ಮೀರ ಮತ್ತು ಅಫ್ಘಾನಿಸ್ಥಾನದಲ್ಲಿ ಹಲವಾರು ಉಗ್ರ ಚಟುವಟಿಕೆಗಳ ರೂವಾರಿ ಎಂದು ತಿಳಿದುಬಂದಿದೆ. ಇನ್ನು
ಇಬ್ರಾಹಿಂ ಅಜ್ಹರ್ ಜೈಶ್ ಮುಖ್ಯಸ್ಥನ ಹಿರಿಯ ಸಹೋದರನಾಗಿದ್ದು 1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಕಂದಹಾರ್ ಗೆ ಅಪಹರಿಸಿದ್ದ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಒಂದು ಯೋಜಿತ ದಾಳಿಯ ಮೂಲಕ ಭಾರತೀಯ ವಾಯುಸೇನೆಯು ಪಾಕಿಸ್ಥಾನ ಮತ್ತು ಜೈಶ್ ಸಹಿತ ಪಾಕ್ ಪೋಷಿತ ಉಗ್ರ ಸಂಘಟನೆಗಳಿಗೆ ಭರ್ಜರಿ ಶಾಕ್ ನೀಡಿದೆ ಅನ್ನುವುದಂತೂ ಸತ್ಯ.