ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಅಧಿಕಾರ ಪಡೆಯುವತ್ತ ನಾಗಾಲೋಟ ಮುಂದುವರಿಸಿದೆ. ಇದೇ ವೇಳೆ ಕಳೆದೈದು ವರ್ಷ ಅಧಿಕಾರ ನಡೆಸಿದ್ದ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.
ಅಧಿಕಾರ ಕಳೆದುಕೊಳ್ಳುವ ಬಗ್ಗೆ ಸ್ಪಷ್ಟ ಸೂಚನೆ ದೊರೆತ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
“ನಾನು ಜನರ ಆದೇಶವನ್ನು ಗೌರವಿಸುತ್ತೇನೆ. ಕಳೆದ 5 ವರ್ಷಗಳಿಂದ ಪ್ರಧಾನಿ ಮತ್ತು ಇತರ ಕೇಂದ್ರ ನಾಯಕತ್ವಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ರಾಜಕೀಯವನ್ನು ಲೆಕ್ಕಿಸದೆ ರಾಜ್ಯದ ಅಭಿವೃದ್ಧಿಗೆ ನಿಲ್ಲುತ್ತೇವೆ. ನಾವು ನಮ್ಮ ನ್ಯೂನತೆಗಳನ್ನು ವಿಶ್ಲೇಷಿಸುತ್ತೇವೆ ಮತ್ತು ಮುಂದಿನ ಅವಧಿಯಲ್ಲಿ ಸುಧಾರಿಸುತ್ತೇವೆ” ಎಂದು ಠಾಕೂರ್ ಹೇಳಿದರು.
ಇದನ್ನೂ ಓದಿ:ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಯಾರಾಗಲಿದ್ದಾರೆ ಮುಖ್ಯಮಂತ್ರಿ ಅಭ್ಯರ್ಥಿ?
ಇಂದಿನ ಫಲಿತಾಂಶಗಳ ಘೋಷಣೆಯ ನಂತರ ಚಂಡೀಗಢದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಎಲ್ಲಾ ಹೊಸದಾಗಿ ಚುನಾಯಿತ ಶಾಸಕರ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಸಿಎಲ್ ಪಿ ನಾಯಕನನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಯಿದೆ.