ಬನಹಟ್ಟಿ: ಜೈನ ಧರ್ಮದ ಇತಿಹಾಸ ಕುರುಹುಗಳಿರುವ ಭದ್ರಗಿರಿ ಬೆಟ್ಟ ಪ್ರದೇಶದಲ್ಲಿ ಸರಕಾರ ಸಂತ್ರಸ್ತರಿಗೆ ಸ್ಥಳ ನೀಡುವ ಸಲುವಾಗಿ ಸರ್ವೇ ಕಾರ್ಯವನ್ನು ಆರಂಬಿಸಿದ್ದನ್ನು ವಿರೋಧಿಸಿ ಜೈನ ಮುನಿ ಕುಲರತ್ನ ಭೂಷಣ ಮಹಾರಾಜರು ಶನಿವಾರ ಶಾಸಕ ಸಿದ್ದು ಸವದಿ ಮನೆ ಆವರಣದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರ ಧರ್ಮದ ಮೇಲೆ ಅನ್ಯಾಯ ಮಾಡುತಿದ್ದು ಇತಿಹಾಸವನ್ನು ಉಳಿಸುವ ಕಾರ್ಯ ಮಾಡದೆ ಅಳಿಸುವ ಕಾರ್ಯಕ್ಕೆ ಕೈ ಹಾಕಿದೆ. ಈಗಾಗಲೇ 89 ಎಕರೆ 30 ಗುಂಟೆ ಸ್ಥಳವನ್ನು ಜೈನ ಧರ್ಮದ ಅಭಿವೃದ್ಧಿಗಾಗಿ ಕೇಳಿ ಸರಕಾರಕ್ಕೆ 2013ರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೂ ಇದುವರೆಗೆ ಯಾವುದೇ ರೀತಿಯ ಸ್ಥಳವನ್ನು ಕೊಡದೇ ಅದನ್ನು ಪುನರ್ವಸತಿ ಕೇಂದ್ರಕ್ಕೆ ನೀಡುತ್ತಿರುವುದು ಸರಿಯಲ್ಲ ಎಂದು ಕುಲರತ್ನ ಭೂಷಣ ಮಹಾರಾಜರು ತಿಳಿಸಿದರು.
ಸರ್ವೇ ನಂ. 142/ಎ ನಲ್ಲಿ ಒಟ್ಟು 336 ಎಕರೆ ಪ್ರದೇಶವಿದ್ದು ಭದ್ರಗಿರಿ ಬೆಟ್ಟಕ್ಕೆ 89.30 ಗುಂಟೆ ಸ್ಥಳವನ್ನು ಬಿಟ್ಟು ಉಳಿದ ಸ್ಥಳದಲ್ಲಿ ಪುನರ್ವಸತಿ ಕೇಂದ್ರಕ್ಕೆ ನೀಡಲು ಇದೆ ವೇಳೆ ಆಗ್ರಹಿಸಿದರು. ಭದ್ರಗಿರಿ ಬೆಟ್ಟದಲ್ಲಿ ಪ್ರಾಚೀನ ಕಾಲದಲ್ಲಿ 772 ಜೈನ ಧರ್ಮದ ಗುಂಪಾಗಳಿದ್ದು(ಬಸದಿ), ಇವುಗಳಲ್ಲಿ 603 ಗುಂಪಾಗಳನ್ನು ಸಂಶೋಧನೆಯ ಮೂಲಕ ಪತ್ತೆ ಹಚ್ಚಲಾಗಿದೆ. ಆದ್ದರಿಂದ ಸರಕಾರ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಬದುಕು ಬದುಕಲು ಬೀಡಿ ಎಂಬುದು ನಮ್ಮ ಧರ್ಮದ ಉದ್ದೇಶ. ಆದ್ದರಿಂದ ಇತಿಹಾಸ ಉಳಿಯಬೇಕು. ಸರಕಾರದ ಸರ್ವೇ ಕಾರ್ಯವನ್ನು ವಿರೋಧಿಸಿ ರಸ್ತೆಯ ಮೇಲೆ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಬೇಕಾಗಿತ್ತು. ಆದರೆ ಸಾರ್ವಜನಿಕರಿಗೆ ತೊಂದರೆ ನೀಡಬಾರದೆಂಬ ಉದ್ದೇಶದಿಂದ ಶಾಸಕರ ಮನೆಯ ಮುಂದೆ ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ ಎಂದು ಮುನಿಗಳು ತಿಳಿಸಿದರು.
ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಶಿಲ್ದಾರ ಪ್ರಶಾಂತ ಚನಗೋಂಡ ಆಗಮಿಸಿ ಮಹಾರಾಜರ ಮನವೊಲಿಕೆಗೆ ಪ್ರಯತ್ನ ನಡೆಸಿದರು.