ರಾಜನಂದಗಾಂವ್: ಹಿರಿಯ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಇಂದು ಛತ್ತೀಸ್ ಗಢದ ಡೊಂಗರಗಢದಲ್ಲಿ ಚಂದ್ರಗಿರಿ ತೀರ್ಥದಲ್ಲಿ ಕೊನೆಯುಸಿರೆಳೆದರು. ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಸಲ್ಲೇಖನ ವೃತ ಕೈಗೊಂಡಿದ್ದರು.
ಸಲ್ಲೇಖನ ಎಂಬುದು ಜೈನ ಧಾರ್ಮಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಸ್ವಯಂಪ್ರೇರಿತ ಉಪವಾಸವನ್ನು ಒಳಗೊಂಡಿರುತ್ತದೆ ಎಂದು ತೀರ್ಥರ ಹೇಳಿಕೆ ತಿಳಿಸಿದೆ.
ಆಚಾರ್ಯ ವಿದ್ಯಾಸಾಗರ ಮಹಾರಾಜರು ಬೆಳಗಿನ ಜಾವ 2:35ಕ್ಕೆ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ಮೂಲಕ ಸಮಾಧಿ ಪಡೆದರು ಎಂದು ಪ್ರಕಟಣೆ ತಿಳಿಸಿದೆ.
“ಮಹಾರಾಜರು ಕಳೆದ ಆರು ತಿಂಗಳಿಂದ ಡೊಂಗರಗಢದಲ್ಲಿ ತೀರ್ಥದಲ್ಲಿ ತಂಗಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಸ್ವಯಂ ಪ್ರೇರಣೆಯಿಂದ ಉಪವಾಸ ಮಾಡುವ ಧಾರ್ಮಿಕ ಆಚರಣೆಯಾದ ಸಲ್ಲೇಖನವನ್ನು ಮಾಡುತ್ತಿದ್ದರು. ಆಹಾರ ಸೇವನೆಯನ್ನು ತ್ಯಜಿಸಿದ್ದರು. ಜೈನ ಧರ್ಮದ ಪ್ರಕಾರ, ಇದು ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳಲಾದ ಪ್ರತಿಜ್ಞೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೋದಿ ಸಂತಾಪ: ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
“ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರ ಅಮೂಲ್ಯವಾದ ಪ್ರಯತ್ನಗಳು ಯಾವಾಗಲೂ ಸ್ಮರಣೀಯವಾಗಿದೆ. ಕಳೆದ ವರ್ಷ ಛತ್ತೀಸ್ ಗಢದ ಚಂದ್ರಗಿರಿ ಜೈನ ದೇವಾಲಯದಲ್ಲಿ ಅವರನ್ನು ಭೇಟಿ ಮಾಡಿದ್ದು ನನಗೆ ಅವಿಸ್ಮರಣೀಯವಾಗಿದೆ.” ಎಂದು ಹೇಳಿದ್ದಾರೆ.