ಚೆನ್ನೈ: ರಜನೀಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್, ವಿನಾಯಕನ್ ಹೀಗೆ ಸೌತ್ ಸಿನೆಮಾದ ದಿಗ್ಗಜ ನಟರನ್ನೊಳಗೊಂಡ ʻಜೈಲರ್ʼ ಸಿನೆಮಾ ಭಾರತೀಯ ಚಿತ್ರರಂಗದ ದಾಖಲೆಗಳನ್ನು ಪುಡಿಗೈಯ್ಯುತ್ತಾ ಮುನ್ನುಗ್ಗುತ್ತಿದೆ. ಮಾಸ್ ಎಂಟ್ರಿಯೊಂದಿಗೆ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಕಂಡು ಅಬ್ಬರಿಸಿದ್ದ ʻಜೈಲರ್ʼ ಎರಡನೇ ದಿನವೂ ದಾಖಲೆಯ ಕಲೆಕ್ಷನ್ ಕಂಡಿದೆ.
ʻಜೈಲರ್ʼನಲ್ಲಿ ತನ್ನ ಮಾಸ್ ನಟನೆಯಿಂದಲೇ ಮೋಡಿ ಮಾಡಿರುವ ತಲೈವಾ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವಣ್ಣ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿಮಾನಿಗಳೂ ಸಿನೆಮಾವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಟೆರರ್ ಲುಕ್‌ನೊಂದಿಗೆ ಮಿಂಚಿರುವ ಮಲಯಾಳಂನ ಖ್ಯಾತ ನಟ ವಿನಾಯಕನ್‌ನ ʻವರ್ಮಾʼ ಪಾತ್ರಕ್ಕೂ ಜನ ಬಹುಪರಾಕ್ ಎಂದಿದ್ದಾರೆ. ಇನ್ನು ʻಕಾವಾಲಯ್ಯಾʼ ಹಾಡಿಗೆ ಸೌತ್ ಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದು ಸಿನಿಪ್ರಿಯರನ್ನು ಕುಂತಲ್ಲೇ ಕುಣಿಯುವಂತೆ ಮಾಡಿದೆ.
ಬಿಡುಗಡೆಯಾದ ಮೊದಲ ದಿನವೇ ʻಜೈಲರ್ʼ 70 ಕೋಟಿಗೂ ಹೆಚ್ಚು ಬಾಕ್ಸ್‌ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಿಗೆ ಡಬ್ ಆಗಿರುವ ಜೈಲರ್ ಮೊದಲ ದಿನ ತಮಿಳುನಾಡಿನಲ್ಲೇ ಸುಮಾರು 24 ಕೋಟಿ ರೂ. ಬಾಚಿಕೊಂಡಿದೆ. ಅದಲ್ಲದೇ, ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳದಲ್ಲಿ ಸುಮಾರು 26 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನುಳಿದಂತೆ ಭಾರತದ ಇತರೆ ರಾಜ್ಯಗಳು ಮತ್ತು ವಿದೇಶದಿಂದಲೂ ʻಜೈಲರ್ʼ ಸುಮಾರು 22 ಕೋಟಿ ರೂ. ಬಾಚಿಕೊಂಡಿದೆ.
ಎರಡನೇ ದಿನವೂ ಇದೇ ಕ್ರೇಝ್ ಮುಂದುವರಿಸಿರುವ ʻಜೈಲರ್ʼ ಸುಮಾರು 55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಕೇವಲ ಎರಡೇ ದಿನದಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ʻಜೈಲರ್ʼ 135 ಕೋಟಿ ರೂ. ಗೂ ಹೆಚ್ಚು ಗಳಿಸಿದೆ.
ಶುಕ್ರವಾರ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ʻಬೋಳಾ ಶಂಕರ್ʼ ರಿಲೀಸ್ ಆಗಿದ್ದರೂ, ʻಜೈಲರ್ʼನ ಮಾಸ್ ಎದುರು ಚಿರು ಸಿನೆಮಾ ಮಂಕಾಗಿದೆ. ʻಬೋಳಾ ಶಂಕರ್ʼ ತಮಿಳಿನ ʻವೇದಾಳಂʼ ಸಿನೆಮಾದ ರೀಮೇಕ್ ಆಗಿರುವುದರಿಂದ ʻಜೈಲರ್ʼ ಹವಾ ಎದುರು ಧೂಳಿಪಟವಾಗಿದೆ.
ಶನಿವಾರ ಮತ್ತು ಭಾನುವಾರ ʻಜೈಲರ್ʼ ಇನ್ನೂ ಹೆಚ್ಚು ಗಳಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಬಿಡುಗಡೆಯಾದ ಕೇವಲ ನಾಲ್ಕೇ ದಿನಕ್ಕೆ ʻಜೈಲರ್ʼ 250 ಕೋಟಿ ರೂ. ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Bank Robbery: ಕೇವಲ 5 ನಿಮಿಷದಲ್ಲಿ ಬ್ಯಾಂಕ್ ನಿಂದ 14 ಲಕ್ಷ ರೂ ಲೂಟಿ ಮಾಡಿದ ದರೋಡೆಕೋರರು