ಆತ ರಿಟೈರ್ಡ್ ಜೈಲರ್. ತನ್ನ ಕುಟುಂಬದೊಂದಿಗೆ ಆರಾಮವಾಗಿ, ಮೊಮ್ಮಗನ ಜೊತೆ ಆಟವಾಡುತ್ತಾ ಜಾಲಿಯಾಗಿದ್ದ ಆತನಿಗೆ ಒಂದು ಕಂಟಕ ಎದುರಾಗುತ್ತದೆ. ಅದರಿಂದ ಇಡೀ ಕುಟುಂಬ ವಿಚಲೀತ. ಅಲ್ಲಿಂದ ರಿಟೈರ್ಡ್ ಜೈಲರ್ ಅಖಾಡಕ್ಕೆ ಇಳಿಯುತ್ತಾನೆ. ಆಟವೂ ಶುರುವಾಗುತ್ತದೆ. ಮುಂದಿನದ್ದನ್ನು ನೀವು ಊಹಿಸಿಕೊಂಡು ಹೋಗಬಹುದು. “ಜೈಲರ್’ ಚಿತ್ರವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಬಹುದು. ಮೊದಲರ್ಧ ನಿರ್ದೇಶಕ ನೆಲ್ಸನ್ ಪಾಲಿನದ್ದು, ದ್ವಿತೀಯಾರ್ಧ ರಜನಿಕಾಂತ್ ಅವರದು..
ಫ್ಯಾಮಿಲಿ ಡ್ರಾಮಾದಿಂದ ಆರಂಭವಾಗಿ ಮಾಸ್ ಎಂಟರ್‌ಟೈನರ್ ಆಗಿ ಕೊನೆಯಾಗುವ ಚಿತ್ರ “ಜೈಲರ್’. “ಜೈಲರ್’ನಲ್ಲಿ ಏನಿದೆ ಎಂದು ಕೇಳಿದರೆ ಒಂದೇ ಮಾತಲ್ಲಿ ಹೇಳುವುದು ಕಷ್ಟ. ಏಕೆಂದರೆ ರಜನಿಕಾಂತ್ ಅವರ ಸಿನಿಮಾಗಳಲ್ಲಿ ಇರುವ ಔಟ್ ಅಂಡ್ ಔಟ್ ಆ್ಯಕ್ಷನ್, ಪಂಚಿಂಗ್ ಡೈಲಾಗ್, ಮ್ಯಾನರಿಸಂ…. ಇದೆ ಎಂದು ಹೇಳುವಂತಿಲ್ಲ. ಅದಕ್ಕೆ ಕಾರಣ ನಿರ್ದೇಶಕ ನೆಲ್ಸನ್ ಅವರ ಫ್ಯಾಮಿಲಿ ಡ್ರಾಮಾ. ಆರಂಭದಿಂದ ಬಹುತೇಕ ಇಂಟರ್‌ವಲ್‌ವರೆಗೆ ಈ ಚಿತ್ರ ಸೆಂಟಿಮೆಂಟ್, ಕಾಮಿಡಿಯಲ್ಲೇ ಪ್ರೇಕ್ಷಕನನ್ನು ಹಿಡಿದಿಡಲು ಪ್ರಯತ್ನಿಸುತ್ತದೆ. ಇಲ್ಲಿ ಅಭಿಮಾನಿಗಳು ತಮ್ಮ “ಸೂಪರ್‌ಸ್ಟಾರ್’ ಸ್ಟೈಲ್ ಅನ್ನು ಹೆಚ್ಚು ನಿರೀಕ್ಷಿಸುವಂತಿಲ್ಲ.
ಹಾಸ್ಯನಟ ಯೋಗಿ ಬಾಬು ಹಾಗೂ ರಜನಿಕಾಂತ್ ನಡುವಿನ ಕೆಲವು ಕಾಮಿಡಿ ಸಂಭಾಷಣೆಯ ದೃಶ್ಯಗಳೇ ಇಲ್ಲಿನ ಜೀವಾಳ. ಸಿನಿಮಾದ ಆ್ಯಕ್ಷನ್ ಅಬ್ಬರ ನಿಂತಿರೋದು ದ್ವಿತೀಯಾರ್ಧದಲ್ಲಿ. ಇಲ್ಲಿ ರಿಟೈರರ್ಡ್ ಜೈಲರ್‌ನ ಸಾಮರ್ಥ್ಯ, ಆತನ ನೆಟ್‌ವರ್ಕ್, ಆತ ಮಾಡುವ ಪ್ಲ್ರಾನ್, ಎದುರಾಳಿಯ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ… ಇಂತಹ ಅಂಶಗಳ ಮೂಲಕ ರಜನಿ ಫ್ಯಾನ್ಸ್ ಅನ್ನು ರಂಜಿಸುವ ಕೆಲಸ ನಡೆಯುತ್ತದೆ. ಈ ಹಂತದಲ್ಲಿ ಲಾಜಿಕ್ ಹುಡುಕುವ ಗೋಜಿಗೆ ಹೋಗದೇ ಸಿನಿಮಾವನ್ನು ಎಂಜಾಯ್ ಮಾಡಿದರೆ ಆ ಕ್ಷಣದ ಖುಷಿ ನಿಮ್ಮದು.
ಇನ್ನು, ಇಡೀ ಸಿನಿಮಾ ನಿಂತಿರೋದು ಜವಾಬ್ದಾರಿಯುತ ತಂದೆ ಹಾಗೂ ಆತನ ಕರ್ತವ್ಯ ನಿಷ್ಠೆಯ ಮೇಲೆ. ಈ ಹಂತದಲ್ಲಿ ಒಂದಷ್ಟು ಟ್ವಿಸ್ಟ್- ಟರ್ನ್ಗಳು ಬರುತ್ತವೆ. ಜೊತೆಗೆ ಶಿವರಾಜ್‌ಕುಮಾರ್, ಜಾಕಿಶ್ರಾಫ್, ಮೋಹನ್ ಲಾಲ್ ಕೂಡಾ ಒಂದೆರಡು ದೃಶ್ಯಗಳಲ್ಲಿ ಬರುತ್ತಾರೆ. ಅದಕ್ಕೊಂದು ಕಾರಣವೂ ಇದೆ.
“ಜೈಲರ್’ ಆಗಿ ರಜನಿಕಾಂತ್ ಸ್ಟೈಲ್ ಅನ್ನು ಮತ್ತಷ್ಟು ತೋರಿಸುವ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ. ಕೆಲವೇ ನಿಮಿಷಗಳಲ್ಲಿ ಜೈಲರ್ ಫ್ಲ್ಯಾಶ್ ಬ್ಯಾಕ್ ಬಂದು ಹೋಗುತ್ತದೆಯಷ್ಟೇ. ರಜನಿಕಾಂತ್ ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ತೂಕದ ಪಾತ್ರವನ್ನು ಇಡೀ ಸಿನಿಮಾದಲ್ಲಿ ತೂಗಿಸಿಕೊಂಡು ಹೋಗಿದ್ದಾರೆ.
ಅವರ ಅಭಿಮಾನಿಗಳಿಗಾಗಿ ಅಲ್ಲಲ್ಲಿ ಒಂದಷ್ಟು ಅವರ “ಸಿಗ್ನೆಚರ್ ಸ್ಟೈಲ್’ ಅನ್ನು ಮಾಡಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತಾರೆ. ಉಳಿದಂತೆ ಶಿವರಾಜ್‌ಕುಮಾರ್ ಅವರದು ಸಣ್ಣ ಪಾತ್ರವಾದರೂ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿರುವ ವಿನಾಯಕನ್ ಒಳ್ಳೆಯ ಸ್ಕೋರ್ ಮಾಡುತ್ತಾರೆ. ಅವರ ಬೆಂಕಿಯುಗುಳುವ ಕಣ್ಣುಗಳು, ಬಾಡಿ ಲಾಂಗ್ವೇಜ್… ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ. “ಕಾವಲಯ್ಯ..’ ಹಾಡು ಸಿನಿಮಾಕ್ಕೊಂದು ಹೊಸ ಕಲರ್ ನೀಡಿದೆ.
ರವಿಪ್ರಕಾಶ್ ರೈ