ನವದೆಹಲಿ: ಬಿಗಿ ಭದ್ರತೆಯ ತಿಹಾರ್ ಜೈಲಿನ ಒಳಗಿನಿಂದಲೇ ನಟೋರಿಯಸ್ ಗ್ಯಾಂಗ್ ಸ್ಟರ್ ಜಿತೇಂದ್ರ ಗೋಗಿ ರಾಜಧಾನಿಯಲ್ಲಿನ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿ ಐದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟ ಗೋಗಿ ವಿರುದ್ಧ ದೂರು ದಾಖಲಾದ ನಂತರ ಪೊಲೀಸರು ತಿಹಾರ್ ಜೈಲು ಆವರಣದ ಮೇಲೆ ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ಗೋಗಿ ಬಳಿ ಇದ್ದ ಮೂರು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಗೋಗಿ ತಿಹಾರ್ ಜೈಲಿನ ಎಂಟನೇ ನಂಬರ್ ಸೆಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ ರೋಹಿಣಿ ಪ್ರದೇಶದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಐದು ಕೋಟಿ ರೂಪಾಯಿ ಹಣ ಕೊಡುವಂತೆ ಧಮ್ಕಿ ಹಾಕಿದ್ದ. ಅಲ್ಲದೇ ಈ ನಟೋರಿಯಸ್ ರೌಡಿ ಗೋಗಿ, ಒಂದು ವೇಳೆ ಹಣ ಕೊಡಲು ವಿಫಲವಾದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ವರದಿ ತಿಳಿಸಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಗೋಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗೋಗಿ ತಲೆಗೆ(ಮಾಹಿತಿ ನೀಡಿದವರಿಗೆ) 4 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಎರಡು ಲಕ್ಷ ರೂಪಾಯಿ ಬಹುಮಾನವನ್ನು ಹರ್ಯಾಣ ಪೊಲೀಸರಿಗೆ ಘೋಷಿಸಲಾಗಿದೆ. ಗೋಗಿ ದೆಹಲಿಯ ಸ್ಥಳೀಯ ಮುಖಂಡ ವೀರೇಂದ್ರ ಮನ್ನಾ ಹತ್ಯೆಯ ಆರೋಪಿಯಾಗಿದ್ದಾನೆ. ಹಾಡಹಗಲೇ ಪಿಸ್ತೂಲ್ ನಿಂದ 26 ಗುಂಡುಗಳನ್ನು ಹಾರಿಸಿ ಮನ್ನಾ ಅವರನ್ನು ಹತ್ಯೆಗೈದಿದ್ದ ಎಂದು ವರದಿ ವಿವರಿಸಿದೆ.