Advertisement

ಜೈಲು ಪಾಲಾದ ದಂಪತಿ: ಮಕ್ಕಳು ಪರಿತಾಪ

04:04 PM Dec 21, 2018 | Team Udayavani |

ಚಾಮರಾಜನಗರ: ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಗಳಾದ ಅಂಬಿಕಾ ಮತ್ತು ಮಾದೇಶ್‌ ದಂಪತಿ ಜೈಲು ಪಾಲಾಗಿದ್ದು, ತಂದೆ ತಾಯಿ ಮಾಡಿದ ತಪ್ಪಿಗೆ ಅವರ ಅಮಾಯಕ ಮಕ್ಕಳು ಪರಿತಾಪ ಅನುಭವಿಸಬೇಕಾಗಿದೆ.
 
ದೇವಾಲಯದ ವ್ಯವಸ್ಥಾಪಕನಾಗಿದ್ದ ಮಾದೇಶ ಅಲಿಯಾಸ್‌ ಮಹದೇವಸ್ವಾಮಿ (46) ಕೊಳ್ಳೇಗಾಲದ ಶಾಗ್ಯ ಗ್ರಾಮದವನು. ಆತನ ಪತ್ನಿ ಅಂಬಿಕಾ (35) ಗೃಹಿಣಿಯಾಗಿದ್ದು ಪತಿ ಪತ್ನಿ ಶಾಗ್ಯದಲ್ಲೇ ಇದ್ದರು. ಮಾರಮ್ಮ ದೇವಸ್ಥಾನದ ವ್ಯವಹಾರದಲ್ಲಿ ತೊಡಗಿಕೊಂಡ ನಂತರ ಪತಿ ಪತ್ನಿ ಇಬ್ಬರೂ ಸುಳ್ವಾಡಿ ಗ್ರಾಮದ ಸಮೀಪದಲ್ಲಿರುವ ಮಾರ್ಟಳ್ಳಿಯಲ್ಲಿ ಕೆಲವು ವರ್ಷಗಳಿಂದ ಮನೆ ಮಾಡಿಕೊಂಡು ವಾಸವಿದ್ದರು.
 
ಪ್ರಕರಣದ ಸೂತ್ರಧಾರ ಇಮ್ಮಡಿ ಸ್ವಾಮೀಜಿ ಆರೋಪಿ ನಂ. 1 ಆಗಿದ್ದು, ಅಂಬಿಕಾ ಪ್ರಕರಣದಲ್ಲಿ ಆರೋಪಿ ನಂ. 2 ಆಗಿದ್ದಾಳೆ, ಮಾದೇಶ ಆರೋಪಿ ನಂ. 3, ದೊಡ್ಡಯ್ಯ ಆರೋಪಿ ನಂ. 4 ಆಗಿದ್ದಾನೆ. ಬುಧವಾರ ಬಂಧಿತರಾದ ಈ ನಾಲ್ವರನ್ನೂ ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸಿ, ಡಿ. 22ರವರೆಗೂ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 15 ಜನರು ಮೃತರಾಗಿರುವ ಈ ಪ್ರಕರಣದ ಗಂಭೀರತೆ ಗಮನಿಸಿದರೆ ನಾಲ್ವರು ಆರೋಪಿ ಗಳಿಗೂ ಜಾಮೀನು ಸಿಗುವ ಸಾಧ್ಯತೆಗಳು ಕ್ಷೀಣವಾಗಿವೆ.
 
ಮಗಳು ಎಂಜಿನಿಯರಿಂಗ್‌ ವಿದ್ಯಾರ್ಥಿನಿ, ಮಗ 7ನೇ ಕ್ಲಾಸ್‌: ಅಂಬಿಕಾ ಮತ್ತು ಮಾದೇಶ್‌ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳು ಎಂಜಿ ನಿಯರಿಂಗ್‌ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. 

Advertisement

ತಂದೆ ತಾಯಿ ಇಬ್ಬರೂ ಸೇರಿ ನಡೆಸಿರುವ ನೀಚ ಕೃತ್ಯದಿಂದ ಅಮಾಯಕರಾದ ಮಕ್ಕಳು ಮಾನಸಿಕ ಕ್ಷೋಭೆ ಅನುಭವಿಸಬೇಕಾಗಿದೆ. ಮುಖ್ಯವಾಗಿ ತಂದೆ-ತಾಯಿ ಜೊತೆಗಿರದ ಅನಾಥ ಭಾವ. ಅವರ ವಿದ್ಯಾಭ್ಯಾಸ, ಅವರು ಬೇಕು ಬೇಡಗಳನ್ನು ಪೂರೈಸುವ, ಪ್ರೀತಿ ತೋರುವ ಅಪ್ಪ ಅಮ್ಮ ಜೊತೆಗಿಲ್ಲದ ಅಸುರಕ್ಷಿತ ವಾತಾವರಣ. ಇನ್ನೊಂದೆಡೆ
ಸಾಮಾಜಿಕವಾಗಿ ಪಡಬೇಕಾದ ಕಷ್ಟಗಳು.

ಇರುವಷ್ಟರಲ್ಲಿ ಜೀವನವನ್ನು ಸುಂದರವಾಗಿ ಕಳೆಯಬಹುದಾಗಿದ್ದ ದಂಪತಿ, ಸ್ವಾರ್ಥಕ್ಕೆ ಬಿದ್ದು ಘೋರ ದುರಂತಕ್ಕೆ ಕಾರಣರಾಗಿ, ಜೈಲು ಪಾಲಾಗಿದ್ದಾರೆ. ಏನೂ ಅರಿಯದ ಮಕ್ಕಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ. ಮಗಳು ಇಂಜಿನಿಯರಿಂಗ್‌ ವ್ಯಾಸಂಗ ಪೂರೈಸಬೇಕಾಗಿದೆ. ಪುತ್ರ ಈಗಿನ್ನೂ 7ನೇ ತರಗತಿಯಲ್ಲಿ ಓದುತ್ತಿದ್ದು ತಂದೆ ತಾಯಿಯ ಸಾಂಗತ್ಯದಲ್ಲಿರಬೇಕಾದ ಬಾಲಕ ಕಿರಿಯ ವಯಸ್ಸಿನಲ್ಲೇ ತೀವ್ರ ಯಾತನೆ ಅನುಭವಿಸಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next