ಚಾಮರಾಜನಗರ: ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಗಿಟ್ಟಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ 8 ಮಂದಿಗೆ ನಗರದ ಸಿಜೆಎಂ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೋಲಾರ ತಾಲೂಕಿನ ಪಟ್ಣ ಗ್ರಾಮದ ಸುನೀಲ್ ಕುಮಾರ್, ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಕುರುವಂಕ ಗ್ರಾಮದ ಸಂತೋಷ್‌ಕುಮಾರ್, ಹಾಸನ ತಾಲೂಕಿನ ಅಂಕಪುರ ಗ್ರಾಮದ ಎ.ಬಿ. ಶಂಕರ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಪ್ಪನಹಳ್ಳಿಯ ಷಣ್ಮುಗ, ಇದೇ ತಾಲೂಕಿನ ಕುಕ್ಕಲದೊಡ್ಡಿಯ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನಹಳ್ಳಿ ಗ್ರಾಮದ ಸಿ.ಎನ್. ಶ್ರೀರಾಮ್, ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯ ಮುನಿರಾಜು, ಹೊಸಕೋಟೆ ತಾಲೂಕಿನ ನಕ್ಕನಹಳ್ಳಿ ಗ್ರಾಮದ ಎನ್. ಬಿ. ಸಿದ್ಧಲಿಂಗಯ್ಯ (ಇವರೆಲ್ಲರೂ 24 ವರ್ಷದಿಂದ 39 ವರ್ಷದೊಳಗಿನವರು) ಶಿಕ್ಷೆಗೆ ಗುರಿಯಾದವರು.
ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇದ್ದ 46 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ 2012 ರ ಆಗಸ್ಟ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಹತೆಗೆ ಅಂಕಪಟ್ಟಿಯನ್ನು ಪರಿಶೀಲಿಸಿ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಈ ಮೇಲ್ಕಂಡವರೂ ಸೇರಿದಂತೆ ಹುದ್ದೆಗೆ ಆಯ್ಕೆ ಮಾಡಲಾಗಿತ್ತು.
ಅಭ್ಯರ್ಥಿಗಳ ಅಂಕಪಟ್ಟಿಯ ನೈಜತೆಯ ಪರಿಶೀಲನೆ ನಡೆಸಿದಾಗ, ಈ ಮೇಲ್ಕಂಡ 8 ಅಭ್ಯರ್ಥಿಗಳ ಅಂಕಪಟ್ಟಿಗಳು ನಕಲಿ ಎಂಬುದು ತಿಳಿದು ಬಂದಿತು. ಈ ಆರೋಪಿಗಳು ನೇಮಕಾತಿ ಪ್ರಾಧಿಕಾರಕ್ಕೆ ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮಲೆಕ್ಕಾಧಿಕಾರಿ ಹುದ್ದೆ ಪಡೆದು ಸರ್ಕಾರಕ್ಕೆ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದ ಕಾರಣ ಇವರ ವಿರುದ್ಧ ನಗರದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಎಂಟು ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
ಬಳಿಕ ತನಿಖಾಧಿಕಾರಿ ಎಂ. ನಂಜಪ್ಪ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 8 ಮಂದಿ ಅಪರಾಧಿಗಳಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಿರಿಯ ಸಹಾಯಕ ಸರ್ಕಾರಿ ಅಬಿಯೋಜಕ ಎ.ಸಿ. ಮಹೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.