Advertisement

ಮೂರೂವರೆ ವರ್ಷ ಲಾಲುಗೆ ಜೈಲು

06:05 AM Jan 07, 2018 | Harsha Rao |

ಹೊಸದಿಲ್ಲಿ /ರಾಂಚಿ: ಬಹುಕೋಟಿ ರೂ. ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ಗೆ ಮೂರೂವರೆ ವರ್ಷ ಜೈಲಾಗುವ ಮೂಲಕ 21 ವರ್ಷಗಳ ಹಿಂದಿನ ಹಗರಣಕ್ಕೆ ಈಗ ಮುಕ್ತಿ ಸಿಕ್ಕಿದೆ.

Advertisement

ರಾಂಚಿಯ ಬಿರ್ಸಾ ಮುಂಡಾ ಕಾರಾಗೃಹದಲ್ಲಿರುವ ಆರ್‌ಜೆಡಿ ವರಿಷ್ಠ ಲಾಲು ಅವರನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಿ ಸಿಬಿಐಯ ವಿಶೇಷ ನ್ಯಾಯಾಲಯದ ನ್ಯಾ| ಶಿವಪಾಲ್‌ ಸಿಂಗ್‌ ಈ ತೀರ್ಪು ನೀಡಿದ್ದಾರೆ. ಜೈಲು ಶಿಕ್ಷೆಯ ಜತೆಗೆ 10 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.

ಲಾಲು ಜತೆಗೆ ಬಿಹಾರದ ಮಾಜಿ ಸಿಎಂ, ಮಾಜಿ ಶಾಸಕ ಜಗದೀಶ್‌ ಶರ್ಮಾಗೆ ಏಳು ವರ್ಷ ಜೈಲು, 
ಆರ್‌ಜೆಡಿಯ ಮಾಜಿ ನಾಯಕ ಆರ್‌.ಕೆ. ರಾಣಾಗೆ ಮೂರೂ ವರೆ ವರ್ಷ ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ. ಐಎಎಸ್‌ ಅಧಿಕಾರಿಗಳಾದ ಪೂಲ್‌ಚಂದ್‌ ಸಿಂಗ್‌, ಬೆಕ್‌ ಜೂಲಿಯಸ್‌ ಮತ್ತು ಮಹೇಶ್‌ ಪ್ರಸಾದ್‌ ಸಹಿತ ಆರು ಮಂದಿಗೆ ಮೂರೂವರೆ ವರ್ಷ, ಇತರ ಏಳು ಮಂದಿಗೆ 7 ವರ್ಷ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ಮೇವು ಹಗರಣ ಸಂಬಂಧ ಲಾಲು ಜೈಲು ಶಿಕ್ಷೆ ಎದುರಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದಿನ ಪ್ರಕರಣದಲ್ಲಿ ಅವರಿಗೆ 5 ವರ್ಷ ಜೈಲು ಶಿಕ್ಷೆಯಾಗಿತ್ತು.

ಏನಿದು ಪ್ರಕರಣ?: 1990 ಮತ್ತು 1994ರಲ್ಲಿ ಅಂದಿನ ಬಿಹಾರದ ದೇವಗಡ ಖಜಾನೆಯಿಂದ 89.27 ಲಕ್ಷ ರೂ. ವಿಥ್‌ಡ್ರಾ ಮಾಡಿದ ಪ್ರಕರಣ ಇದಾಗಿದೆ. 1996ರಲ್ಲಿ ಪಟ್ನಾ ಹೈಕೋರ್ಟ್‌ ಹಗರಣದ ತನಿಖೆ ನಡೆಸಿ ಚಾರ್ಜ್‌ಶೀಟ್‌  ಸಲ್ಲಿಸುವಂತೆ ಆದೇಶಿಸಿತ್ತು. ಅದರಂತೆ 1997ರ ಅ.27ರಂದು 38 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಈ ಪೈಕಿ 11 ಮಂದಿ ವಿಚಾರಣೆ-ತನಿಖೆ ವೇಳೆ ಅಸುನೀಗಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ ಲಾಲು ಅವರಿಗೆ ಶಿಕ್ಷೆಯಾಗಿರುವ ಎರಡನೇ ಪ್ರಕರಣ ಇದು.

Advertisement

ದುಮ್ಕಾ ಪ್ರಕರಣ: ಲಾಲು ಮತ್ತು ಇತರ ಮೂವರ ವಿರುದ್ಧ ದುಮ್ಕಾ ಖಜಾನೆಯಿಂದ 3.97 ಕೋಟಿ ರೂ., ಚೈಬಾಸಾ ಖಜಾನೆಯಿಂದ 36 ಕೋಟಿ ರೂ.ಮತ್ತು ಡೊರಾಂಡಾ ಖಜಾನೆಯಿಂದ 184 ಕೋಟಿ ರೂ. ಮೊತ್ತವನ್ನು ವಿಥ್‌ಡ್ರಾ ಮಾಡಿದ ಪ್ರಕರಣ ಸಂಬಂಧ ಕೇಸು ದಾಖಲಾಗಿತ್ತು. 2013ರ ಸೆ.30ರಂದು ಚೈಬಾಸಾ ಖಜಾನೆಯಿಂದ ಅಕ್ರಮವಾಗಿ 37.7 ಕೋಟಿ ರೂ. ವಿಥ್‌ಡ್ರಾ ಮಾಡಿದ ಆರೋಪ  ಸಂಬಂಧ ಮಾಜಿ ಮುಖ್ಯಮಂತ್ರಿ ಡಾ| ಜಗನ್ನಾಥ ಮಿಶ್ರಾ ಮತ್ತಿತರರ ವಿರುದ್ಧದ ಆರೋಪಗಳು ಸಾಬೀತಾಗಿದ್ದವು.

ವಿಚಾರಣೆ ಶುರು ಮಾಡಲು ಬಯಸುತ್ತೀರಾ, ಇಲ್ವಾ?: ಲಾಲುಗೆ ರಾಂಚಿ ಕೋರ್ಟಿಂದ ಶಿಕ್ಷೆ ಘೋಷಣೆಯಾಗುವು ದಕ್ಕಿಂತ ಮೊದಲು ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಲಾಲು ಪುತ್ರಿ ಮಿಸಾ ಭಾರ್ತಿ, ಪತಿ ಶೈಲೇಶ್‌ಕುಮಾರ್‌ ವಿರುದ್ಧ 2ನೇ ಚಾರ್ಜ್‌ ಶೀಟ್‌ ಸಲ್ಲಿಸಿದೆ. ವಿಚಾರಣೆಯನ್ನು ಫೆ. 5ಕ್ಕೆ ನಿಗದಿ ಮಾಡಿದೆ. ಈ ನಡುವೆ ಲಾಲು ಕುಟುಂಬ ಸದಸ್ಯರ ವಿರುದ್ಧ ಪದೇ ಪದೇ ಚಾರ್ಜ್‌ಶೀಟ್‌ ಸಲ್ಲಿಸುತ್ತಿರುವ ಇ.ಡಿ. ವಿರುದ್ಧ ವಿಶೇಷ ಕೋರ್ಟ್‌ನ ನ್ಯಾ| ಎನ್‌.ಕೆ. ಮಲ್ಹೋತ್ರಾ ಕಿಡಿಕಿಡಿಯಾಗಿದ್ದಾರೆ. “ನೀವು ವಿಚಾರಣೆ ಶುರು ಮಾಡಬೇಕೆಂದು ಬಯಸುತ್ತೀರಾ ಅಥವಾ ಆರೋಪಪಟ್ಟಿ ಸಲ್ಲಿಸುತ್ತಲೇ ಇರುತ್ತೀರಾ?’ ಎಂದು ತನಿಖಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.

ತೇಜಸ್ವಿ ಯಾದವ್‌ ಸಿಎಂ ಅಭ್ಯರ್ಥಿ ?
ತೀರ್ಪಿನ ಹಿನ್ನೆಲೆಯಲ್ಲಿ ಮತ್ತು ಲಾಲು ಯಾದವ್‌ ಅನುಪಸ್ಥಿತಿಯಲ್ಲಿ  ಪಕ್ಷದ ಮುಂದಿನ ಬೆಳವಣಿಗೆ ಬಗ್ಗೆ ಚರ್ಚಿಸಲು ಬೆಳಗ್ಗೆ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ  2020ರ ಬಿಹಾರ ಚುನಾವಣೆಯಲ್ಲಿ ಪುತ್ರ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next