ಮಂಗಳೂರು: ನಾಲ್ಕು ವರ್ಷಗಳ ಹಿಂದೆ ನಗರದಲ್ಲಿ ವೃದ್ಧೆಯೊಬ್ಬರ ಕೊರಳಿನಿಂದ ಸರ ಎಗರಿಸಿದ್ದ ಪ್ರಕರಣದಲ್ಲಿ ಸುಳ್ಯ ತಾಲೂಕು ಕಾನತ್ತಿಲ ಕ್ರಾಸ್ ಜಟ್ಟಿಪಳ್ಳ ನಿವಾಸಿ ಯುವಕನಿಗೆ ಮಂಗಳೂರಿನ 2ನೇ ಸಿಜೆಎಂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಹಮ್ಮದ್ ನಿಝಾರ್ ಕೆ. ಶಿಕ್ಷೆಗೊಳಗಾದ ಯುವಕ. ಇತರ ಆರೋಪಿಗಳಾದ ಬೆಳ್ಳಾರೆಯ ಕಾಮಧೇನು ಜ್ಯುವೆಲರ್ನ ಮಾಲಕಿ ತಾರಾ ಕುಮಾರಿ ಹಾಗೂ ಜುರೈಸ್ ಕೆ.ಎಂ ಅವರನ್ನು ಸಾಕ್ಷ್ಯಾಧಾರದ ಕೊರತೆಯಿಂದ ದೋಷಮುಕ್ತಗೊಳಿಸಿದೆ.
ಅಪರಾಧಿ ನಿಝಾರ್‌ಗೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳು ಸಾಮಾನ್ಯ ಸೆರೆಮನೆ ವಾಸ ವಿಧಿಸಲಾಗಿದೆ.
2016 ಅ. 16ರಂದು ಕದ್ರಿ ಕಂಬಳ ರಸ್ತೆ ನಿವಾಸಿ ಅನುರಾಧಾ ಎಸ್. ರಾವ್ ಅವರು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ನಿಝಾರ್ ಹಿಂದುಗಡೆಯಿಂದ ಬಂದು ಏಕಾಏಕಿ ಕುತ್ತಿಗೆಗೆ ಕೈಹಾಕಿ 10.61ಗ್ರಾಂ ತೂಕದ 35 ಸಾವಿರ ರೂ. ಬೆಲೆಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಇನ್ನೊಬ್ಬ ಆರೋಪಿ ಜುರೈಸ್‌ನೊಂದಿಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದ.
ಅಂದಿನ ಮಂಗಳೂರು ಪೂರ್ವ ಇನ್‌ಸ್ಪೆಕ್ಟರ್ ಮಾರುತಿ ಜಿ. ನಾಯಕ್ ಅವರು ಆರೋಪಿಗಳನ್ನು ಬಂಧಿಸಿ ಸುಲಿಗೆ ಮಾಡಿದ್ದ ಸರವನ್ನು ಬೆಳ್ಳಾರೆಯ ಜುವೆಲರಿಯಿಂದ ವಶಪಡಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಕುರಿತು 2ನೇ ಸಿಜೆಎಂ ನ್ಯಾಯಾಧೀಶ ಮಧುಕರ ಪಿ.ಭಾಗವತ್ ಅವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಅವರು ವಾದ ಮಂಡಿಸಿದ್ದರು.