ಬೆಂಗಳೂರು: ಪ್ರವಾಸಿ ವೀಸಾದ ಅಡಿಯಲ್ಲಿ ಭಾರತಕ್ಕೆ ಆಗಮಿಸಿ ಧರ್ಮ ಪ್ರಚಾರ ನಡೆಸಿದ್ದ ಐವರು ವಿದೇಶಿ ತಬ್ಲೀಘಿಗಳಿಗೆ 27 ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ 30 ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಇಲಿಯಾಸ್ ನಗರದಲ್ಲಿ ವಾಸವಿದ್ದ ಇಂಗ್ಲೆಂಡ್ ನ ಇಸ್ಮಾಯಿಲ್ ಹೊಸೈನ್, ಕಜಕಿಸ್ತಾನದ ಇಬ್ಬರು, ಕೀನ್ಯಾ, ಫ್ರಾನ್ಸ್ ನ ಒಬ್ಬೊಬ್ಬ ತಬ್ಲೀಘಿ ಧರ್ಮ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಿದ್ದ ಅರೋಪ ಸಬಂಧ ಅವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ವಿದೇಶಿಯರ ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಏಪ್ರಿಲ್ ನಲ್ಲಿ ಬಂಧಿಸಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಸಿರುವ ಕೋರ್ಟ್, ಆರೋಪಿಗಳು ಧರ್ಮ ಪ್ರಚಾರದಲ್ಲಿ ತೊಡಗಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ, ಸಾಂಕ್ರಾಮಿಕ ಕೋವಿಡ್ ಸೋಂಕು ಹಬ್ಬುತ್ತಿರುವ ಈ ಆತ ದೇಶದಲ್ಲಿ ಇರುವ ಔಚಿತ್ಯದ ಬಗೆಗಿನ ಅಂಶವನ್ನು ಪರಿಗಣಿಸಿದ್ದು. ಆರೋಪಿಗಳಿಗೆ 27 ದಿನ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಅಷ್ಟೇ ಅಲ್ಲದೆ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅವಧಿಯೂ ಶಿಕ್ಷೆಯ ಅವಧಿಗೆ ಒಳಪಡಲಿದೆ.ಒಂದು ವೇಳೆ ಶಿಕ್ಷೆಯ ಅವಧಿ ಪೂರ್ಣ ಗೊಳಿಸಿದ್ದರೆ ಅವರನ್ನು ವಶಕ್ಕೆ ಪಡೆದು ಸ್ವದೇಶಗಳಿಗೆ ಹಿಂದಿರುಗುವರೆಗೆ ನಿಗಾ ಇರಿಸಬೇಕು.ಅವರ ಪಾಸ್ ಪೋರ್ಟ್, ವೀಸಾ ವಾಪಾಸ್ ನೀಡಬೇಕು.
ಜತೆಗೆ, ನಿಗದಿತ ಅವಧಿಯಲ್ಲಿ ಆರೋಪಿಗಳನ್ನು ಸ್ವದೇಶಕ್ಕೆ ಗಡಿಪಾರು ಮಾಡುವ ಕ್ರಮಗಳನ್ನು ಎಫ್ ಆರ್ ಆರ್ ಓ ಕೈಗೊಳ್ಳಬೇಕು. ಸ್ವದೇಶಕ್ಕೆ ಹಿಂತಿರುಗುವ ಎಲ್ಲ ವೆಚ್ಚವನ್ನು ಆರೋಪಿಗಳೇ ಭರಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.