ಬ್ಯಾಡಗಿ: ಆಣೂರು ಕೆರೆ ತುಂಬಿಸುವ ಯೋಜನೆಗೆ ಹಣ ಬಿಡುಗಡೆ ಮಾಡುವ ಮೂಲಕ ತಾಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ ಆಣೂರು ಗ್ರಾಮಸ್ಥರು ಸಾಮೂಹಿಕವಾಗಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಶುಕ್ರವಾರ ತಹಶೀಲ್ದಾರ್ ಗುರು ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಾವೇರಿಯಲ್ಲಿ ಗೊಬ್ಬರ ಕೇಳಿದವನ ಮೇಲೆ ಗುಂಡು ಹಾರಿಸಿದರು, ಇದೀಗ ನೀರು ಕೇಳಿದವರನ್ನು ಜೈಲಿಗಟ್ಟಿದರು. ಹಾಗಿದ್ದರೇ ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವ ತಳಹದಿ ಸರ್ಕಾರವೇ ಅಥವಾ ತುಘಲಕ್ ದರ್ಬಾರ್ ಎಂಬ ಅನುಮಾನ ಕಾಡುತ್ತಿವೆ. ಆಣೂರು ಕೆರೆಗೆ ನೀರು ಪೂರೈಸುವ ಯೋಜನೆಗೆ ಹಣ ನೀಡದಿದ್ದರೆ ಚುನಾವಣೆ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಮತದಾನ ನಮ್ಮ ಸಾಂವಿಧಾನಿಕಬದ್ಧ ಹಕ್ಕು. ಆದರೆ, ಎಲ್ಲ ಪಕ್ಷದಲ್ಲಿಯೂ ರೈತ ವಿರೋಧ ನಿಲುವುಗಳನ್ನೇ ತಳೆಯಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ರೈತರ ವಿರುದ್ಧ ಪೊಲೀಸ್ ಕ್ರಮಕ್ಕೆ ಮುಂದಾಗುತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ಯೋಜನೆ ದೀರ್ಘಾವ ಧಿಯಾಗಿದ್ದರೂ ನೀರಿಗಾಗಿ ನಮ್ಮ ಹೋರಾಟ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ಇಂತಹ ಸಂದರ್ಭದಲ್ಲಿ ಎದುರಾಗಿರುವ ಚುನಾವಣೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ನೀರು ಕೊಡಿ ಮತ ಹಾಕುತ್ತೇವೆ ಎಂದರು.
ಬಸವರಾಜ ಹಲಗೇರಿ ಮಾತನಾಡಿ, ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್ ಕಳಂಕಿತ ಸಚಿವರಲ್ಲೊಬ್ಬರು. ಅವರ ವರ್ತನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ರೈತರು ಕಳೆದುಕೊಳ್ಳುವಂತಾಗಿದೆ. ಈ ಯೋಜನೆಗೆ 212 ಕೋಟಿ ರೂ. ಬಿಡುಗಡೆಗೊಳಿಸಿರುವುದಾಗಿ ಸುಳ್ಳು ಹೇಳಿ ರೈತರಿಗೆ ಮೋಸವೆಸಗುತ್ತಿರುವ ಜಮೀರ್ ವಿರುದ್ಧ ಪೊಲೀಸ್ ಇಲಾಖೆ ವಂಚನೆ ಪ್ರಕರಣ ದಾಖಲಿಸಬೇಕು. ಕೂಡಲೇ ಇಂತಹ ಸುಳ್ಳು ಹೇಳಿಕೆ ನೀಡುವುದನ್ನು ಸಚಿವ ಜಮೀರ್ ನಿಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ಶಿವಯೋಗಿ ಶಿರೂರು ಮಾತನಾಡಿ, ಹಲವು ವರ್ಷಗಳಿಂದ ನ್ಯಾಯ ಸಮ್ಮತ ಮತ್ತು ಸಾಮೂಹಿಕ ಸಮಸ್ಯೆಗಳಿಗಷ್ಟೇ ಹೋರಾಟ ನಡೆಸುತ್ತ ಬಂದಿದ್ದೇವೆ. ಸಾವಿರಾರು ಪ್ರತಿಭಟನೆಗಳು ನಡೆದಿದ್ದರೂ ಎಲ್ಲಿಯೂ ಗುಂಡಾವರ್ತನೆ ಅಸಂಬದ್ಧ ನಡುವಳಿಕೆಗಳಿಂದ ವರ್ತಿಸಿದ ಉದಾಹರಣೆಗಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್ ಅವರ ಸುಳ್ಳು ಹೇಳಿಕೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಈಗಿನ ಚುನಾವಣಾ ಬಹಿಷ್ಕಾರವೂ ಸಹ ಅದರ ವಿರುದ್ಧ ಮುಂದುವರೆದ ಭಾಗವಾಗಿದೆ. ಆಣೂರು ಕೆರೆ ತುಂಬಿಸುವ ವಿಚಾರದಲ್ಲಿ ಯಾರೇ ಮಾತನಾಡಿದರೂ ದಾಖಲೆಗಳ ಸಮೇತ ಹೇಳಿಕೆಗಳನ್ನು ನೀಡಬೇಕು. ಇಲ್ಲದೇ ಹೋದಲ್ಲಿ ರೈತರ ಪ್ರತಿರೋಧ ಎದುರಿಸಲು ಸಜ್ಜಾಗುವಂತೆ ಎಚ್ಚರಿಸಿದರು.
ಕರಬಸಪ್ಪ ಬಡ್ಡಿ, ಮಹದೇವಪ್ಪ ಶಿಡೇನೂರ, ಪ್ರವೀಣ ಹೊಸಗೌಡ್ರ, ಚಿದಾನಂದ ಬಡ್ಡಿಯವರ, ಸಂತೋಷ್, ಬಸಪ್ಪ ಎಲಿ, ಈಶ್ವರ ನೇಶ್ವಿ, ಸೋಮಪ್ಪ ಕಾಯಕದ, ಬಸಲಿಂಗಪ್ಪ ಬ್ಯಾಡಗಿ, ಮಲ್ಲಪ್ಪ ಕೊಪ್ಪದ, ಪ್ರಕಾಶ ಬಣಕಾರ, ರುದ್ರಪ್ಪ ಪೂಜಾರ, ಬಸವರಾಜ ಕುಡಪಲಿ, ಮಂಜು ಕೋಟಿ, ಗಾಣಿಗೇರ, ಕಾಂತೇಶಗೌಡ ಪಾಟೀಲ, ಮಂಜಪ್ಪ ರಿತ್ತಿ ಕರಬಸಪ್ಪ ಆಲದಕಟ್ಟಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಸುಂಡಿ ಜಲಾನಯದ ಮೂಲ ನೀಲ ನಕ್ಷೆಯಂತೆ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಆಣೂರು ಯೋಜನೆಗೆ ಶೀಘ್ರದಲ್ಲೇ ಹಣ ಬಿಡಗಡೆಗೆ ಸರ್ಕಾರ ನಿರ್ಧರಿಸದಿದ್ದರೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಎಲ್ಲ ರೈತರು ಜೈಲ್ ಭರೋ ಹೋರಾಟ ನಡೆಸಲಿದ್ದಾರೆ.
ಕಿರಣ ಗಡಿಗೋಳ, ರೈತ ಮುಖಂಡ