Advertisement
ಯೋಗಿ ಪ್ರಯೋಗಿಸಿದ ಅಸ್ತ್ರಅದು 2020ರ ಜೂನ್. ಮಾಜಿ ಸಚಿವ, ಎಸ್ಪಿ ಮುಖಂಡ ಇಕ್ಬಾಲ್ ಅಲಿ, ಲಕ್ನೋದ ಸರಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಅಕ್ರಮ ಡೆಂಟಲ್ ಕಾಲೇಜನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸಗೊಳಿಸಿದ ಸಿಎಂ ಯೋಗಿ ಆದಿತ್ಯನಾಥ್ ಆಡಳಿತ, ಅಕ್ರಮ ಒತ್ತುವರಿಗಳ ವಿರುದ್ಧ ಸಮರ ಸಾರಿತ್ತು. ಆ ಬಳಿಕ ಅಜಮ್‌ಖಾನ್‌ನ ಅಕ್ರಮ ಆಸ್ತಿ, ರಾಂಪುರದಲ್ಲಿ ನಕಲಿ ದಾಖಲೆಯಿಂದ ತಲೆಯೆತ್ತಿದ್ದ ಮೊಹಮ್ಮದ್ ಅಲಿ ಜೌಹಾರ್ ವಿವಿ, ಪ್ರಯಾಗ್‌ರಾಜ್‌ನಲ್ಲಿ ಕ್ರಿಮಿನಲ್ ಲೀಡರ್ ಅತೀಕ್ ಅಹ್ಮದ್‌ನ ಅಕ್ರಮ ಕಟ್ಟಡಗಳು, ಮಾಜಿ ಶಾಸಕ ಅಶ್ರಫ್ನ ನಕಲಿ ದಾಖಲೆಯ ಆಸ್ತಿಗಳು, 2.1 ಎಕ್ರೆ ಸರಕಾರಿ ಜಾಗದಲ್ಲಿ ಹಬ್ಬಿದ್ದ ರೊಹಿಂಗ್ಯಾಗಳ ಅಕ್ರಮ ನೆಲೆಗಳನ್ನೆಲ್ಲ ಬುಲ್ಡೋಜರ್ ಪುಡಿಗಟ್ಟುತ್ತಾ ಬಂತು. ಯಾವ ವಿರೋಧ, ಪ್ರಭಾವವನ್ನೂ ಲೆಕ್ಕಿಸದೆ ಭೂಗಳ್ಳರ ನೂರಾರು ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳು ನೆಲಕ್ಕುರುಳಿಸಿದ್ದವು.
ಸಾಮಾಜಿಕ ಅಶಾಂತಿ, ಕೋಮು ಸಾಮರಸ್ಯಕ್ಕೆ ಧಕ್ಕೆ, ಅತ್ಯಾಚಾರ- ಹೀಗೆ ಹಲವು ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಸೆರೆಹಿಡಿಯಲೂ ಯೋಗಿ ಆದಿತ್ಯನಾಥ್, ಬುಲ್ಡೋಜರ್ ನೀತಿಯನ್ನೇ ಅನುಸರಿಸಿದ್ದರು. “ಪೊಲೀಸರಿಗೆ ಶರಣಾಗಿ, ಇಲ್ಲವೇ ಮನೆ ಧ್ವಂಸ ನೋಡಲು ಸಿದ್ಧರಾಗಿ’ ಎನ್ನುವ ಮೈಕ್ ಘೋಷಣೆಯೊಂದಿಗೆ, ಎಷ್ಟೋ ಆರೋಪಿ ಗಳ ಅಕ್ರಮ ಮನೆಗಳ ಮುಂದೆ ಬುಲ್ಡೋಜರ್‌ಗಳು ಅಬ್ಬರಿ ಸಿದ್ದವು. ಚುನಾವಣೆ ಹೊಸ್ತಿಲಿನಲ್ಲಿ 51 ಆರೋಪಿಗಳನ್ನು ಅಲ್ಪಾವಧಿಯಲ್ಲಿ ಸೆರೆಹಿಡಿದ ಯೋಗಿ ಸರಕಾರದ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. “ಬುಲ್ಡೋಜರ್ ಬಾಬಾ’ ಅಂತಲೇ ಯೋಗಿ ಅವರನ್ನು ಕರೆಯಲಾಯಿತು. ಬುಲ್ಡೋಜರ್ ದಾಳಿ ಹೇಗೆ ನಡೆಯುತ್ತೆ?
1. ಜಿಲ್ಲಾಡಳಿತದ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಿ, ಗಲಭೆಯಲ್ಲಿ ಭಾಗಿಯಾದ ಅಥವಾ ಆರೋಪಿಗಳ ಅಕ್ರಮ ವಾಸಗೃಹ ಅಥವಾ ಕಟ್ಟಡ ಅಥವಾ ಅಂಗಡಿಗಳನ್ನು ಗುರುತಿಸುತ್ತಾರೆ.
Advertisement
2. ಕಟ್ಟಡ ಧ್ವಂಸಕ್ಕೂ ಮುನ್ನ ನೋಟಿಸ್ ನೀಡಲಾಗುತ್ತದೆ. ಆರೋಪಿಗಳಿಂದ ಸೂಕ್ತ ಉತ್ತರ ಬರದಿದ್ದರೆ, ವಿಚಾರಣೆಗೆ ಸಹಕರಿಸದೇ ಇದ್ದರೆ, ಕಟ್ಟಡಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಒದಗಿಸದೇ ಇದ್ದರೆ ಕಾರ್ಯಾಚರಣೆಗೆ ಆದೇಶಿಸಲಾಗುತ್ತದೆ.
3. ಗುರುತಿಸಿದ ಕಟ್ಟಡದ ಸುತ್ತ ಬ್ಯಾರಿಕೇಡ್ ಹಾಕಿ, ಪೊಲೀಸ್ ಸರ್ಪಗಾವಲು ಹಾಕಲಾಗುತ್ತದೆ.
4. ಕಟ್ಟಡ ಧ್ವಂಸದ ಫೋಟೋಗ್ರಫಿ, ವೀಡಿಯೋಗ್ರಫಿ ಕಡ್ಡಾಯ.
5. ಪೊಲೀಸರು, ಪಿಡಬ್ಲ್ಯುಡಿ ಮತ್ತು ಪೌರಾಡಳಿತದ ಅಧಿಕಾರಿಗಳು, ಒತ್ತುವರಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯುತ್ತದೆ.
ಕರ್ನಾಟಕದಲ್ಲೂ ಸದ್ದು ಮಾಡಲಿದೆಯೇ, ಬುಲ್ಡೋಜರ್?ಶಿವಮೊಗ್ಗ, ಹುಬ್ಬಳ್ಳಿ ಒಳಗೊಂಡಂತೆ ಕೋಮು ಗಲಭೆಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲೂ ಗಲಭೆಕೋರರನ್ನು ಮಟ್ಟಹಾಕಲು ಬುಲ್ಡೋಜರ್ ನೀತಿ ಪ್ರಯೋಗಿಸಬೇಕೆನ್ನುವ ಕೂಗು ಬಲಗೊಳ್ಳುತ್ತಿದೆ. ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಪರೋಕ್ಷವಾಗಿ ಬುಲ್ಡೋಜರ್ ಕಾರ್ಯಾಚರಣೆಯ ಅಗತ್ಯದ ಬಗ್ಗೆ ಮಾತಾಡಿದ್ದರೆ, ಸಚಿವ ಸುನಿಲ್ ಕುಮಾರ್ ನೇರವಾಗಿಯೇ ಗಲಭೆಕೋರರಿಗೆ ಈ ಎಚ್ಚರಿಕೆ ರವಾನಿಸಿದ್ದಾರೆ. ಈಗ ಕುತೂಹಲ ಇರುವುದು, ಸಿಎಂ ಪ್ರಕಟಿಸುವ ನೀತಿಯ ಬಗ್ಗೆಯಷ್ಟೇ. ರಾಜಕೀಯಕ್ಕೆ ಬುಲ್ಡೋಜರ್ ಪ್ರವೇಶ
1. ಉ.ಪ್ರ.ದಲ್ಲಿ ಇಂಥ ಅಕ್ರಮ ಕಟ್ಟಡಗಳ ಕುಳಗಳೆಲ್ಲ, ಸಮಾಜವಾದಿ ಪಕ್ಷದ ಪ್ರಭಾವಿ ವ್ಯಕ್ತಿಗಳೇ ಆಗಿದ್ದರು. ಯೋಗಿ ಸರಕಾರದ ಕ್ರಮದಿಂದ ಕೆರಳಿದ ಎಸ್ಪಿ ಮುಖಂಡ ಅಖೀಲೇಶ್ ಯಾದವ್, “ಕಮಲ ಬಿಟ್ಟು, ಬುಲ್ಡೋಜರನ್ನೇ ಚಿಹ್ನೆ ಮಾಡ್ಕೊಳ್ಳಿ’ ಎಂದಿದ್ದೇ ಬಹುದೊಡ್ಡ ಟ್ವಿಸ್ಟ್. 2. ಟೀಕೆಯನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ, ಬುಲ್ಡೋಜರನ್ನೇ ಎಲೆಕ್ಷನ್ ಪ್ರಚಾರಕ್ಕೆ ಬಳಸಿತ್ತು. 3. ಚುನಾವಣ ಪೋಸ್ಟರ್, ಜಾಹೀರಾತುಗಳಲ್ಲದೆ ಎಲೆಕ್ಷನ್‌ರ್ಯಾಲಿಗಳಲ್ಲೂ ಬುಲ್ಡೋಜರ್‌ಗಳು ದರ್ಶನ ಕೊಟ್ಟವು. 4. ಭೂಗಳ್ಳರನ್ನು ಮಟ್ಟಹಾಕಿದ ಕಾರಣ ಸರಕಾರದ ವಿಶ್ವಾಸಾರ್ಹತೆ ಹೆಚ್ಚಿತು. ಉತ್ತರಪ್ರದೇಶದಲ್ಲಿ ಯೋಗಿ ಮತ್ತೆ ಸಿಎಂ ಆದರು. 5. ಬಿಜೆಪಿಯ ವಿಜಯೋತ್ಸವದಲ್ಲೂ ಗೆದ್ದ ಅಭ್ಯರ್ಥಿಗಳಿಗೆ ಬುಲ್ಡೋಜರ್‌ಗಳ ಮೂಲಕವೇ ಪುಷ್ಪಾರ್ಚನೆ ನಡೆಯಿತು. ಎಲ್ಲೆಡೆ ಗರ್ಜಿಸುತ್ತಿರುವ ಬುಲ್ಡೋಜರ್
ರಾಮನವಮಿ ಸಂದರ್ಭದಲ್ಲಿ ಕೋಮುಗಲಭೆಗೆ ತುತ್ತಾದ ಖಾರ್ಗೋನ್‌ನಲ್ಲಿ ಜೀವಹಾನಿಯಲ್ಲದೆ ಅಪಾರ ಸಾರ್ವಜನಿಕ ಹಾನಿಯೂ ಸಂಭವಿಸಿತ್ತು. ಮೆರವಣಿಗೆ ಮೇಲೆ ಕಲ್ಲೆಸೆದ 50 ಕಿಡಿಗೇಡಿಗಳ ಮನೆಗಳನ್ನು ಮುಲಾ ಜಿಲ್ಲದೆ ಧ್ವಂಸಗೊಳಿಸಲಾಯಿತು. ಒಂದೇ ರಾತ್ರಿಯಲ್ಲಿ 4 ಏರಿಯಾಗಳ ಹಲವು ಅಂಗಡಿಗಳನ್ನು ಬುಲ್ಡೋ ಜರ್‌ಗಳು ನೆಲಕಚ್ಚಿಸಿದ್ದವು. “ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ತಡೆ ಹಾಗೂ ಹಾನಿ ವಸೂಲಿ ಮಸೂದೆ’ಯನ್ನು 2021ರಲ್ಲಿ ಕಾನೂನುಬದ್ಧಗೊಳಿಸಿರುವ ಮಧ್ಯಪ್ರದೇಶ ಸರಕಾರ, ಬುಲ್ಡೋಜರ್ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ಪ್ರಯೋಗಿಸುತ್ತಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾನ್‌ರನ್ನು ಬಿಜೆಪಿ “ಬುಲ್ಡೋಜರ್ ಮಾಮಾ’ ಅಂತಲೇ ಬಿಂಬಿಸುತ್ತಿದೆ. ಖಂಬತ್‌ನಲ್ಲಿ ರಾಮನವಮಿ ವೇಳೆ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲುತೂರಿದ ಮುಸ್ಲಿಂ ಜನಾಂಗಕ್ಕೆ ಸೇರಿದ ಕಿಡಿಗೇಡಿಗಳ ಅಕ್ರಮ ಮನೆಗಳು, ಅಂಗಡಿಗಳನ್ನೂ ಗುಜರಾತ್ ಸರ್ಕಾರ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಿದೆ. ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮಾನ್ ಜಯಂತಿ ಆಚರಣೆ ವೇಳೆ ಕಲ್ಲು ತೂರಿ, ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಕಿಡಿಗೇಡಿಗಳ ಅಕ್ರಮ ಮನೆಗಳ ಮುಂದೆಯೂ ಬುಧವಾರ ಬುಲ್ಡೋಜರ್‌ಗಳು ಗರ್ಜಿಸಿವೆ. ಬಿಜೆಪಿಯ ಹಿಡಿತದಲ್ಲಿರುವ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್, 400 ಪೊಲೀಸರ ಕಾವಲಿ ನೊಂದಿಗೆ 2 ದಿನಗಳ ಅತಿಕ್ರಮಣ ವಿರೋಧಿ ಅಭಿಯಾನ ಆರಂಭಿಸಿತ್ತು. ಆದರೆ, ಧ್ವಂಸ ಪ್ರಕ್ರಿಯೆ ತೀವ್ರತೆ ತಲುಪುವ ಮುನ್ನವೇ ಕೋರ್ಟ್ ಮಧ್ಯಪ್ರವೇಶಿಸಿತು. ಉ.ಪ್ರ. ಮಾದರಿಯಲ್ಲಿ ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕೆಂಬ ಬೇಡಿಕೆ ನಮ್ಮಲ್ಲೂ ಕೇಳಿ ಬರುತ್ತಿದೆ. ಸರಕಾರ ಇನ್ನೂ ನಿರ್ಧರಿಸಿಲ್ಲ. ಸಾರ್ವಜನಿಕ ಆಸ್ತಿ ಹಾನಿಗೊಳಿಸುವ ಪುಂಡಾಟಿಕೆ ಹೀಗೇ ಮುಂದುವರಿದರೆ ನಾವೂ ಪರಿಶೀಲಿಸಬೇಕಾಗುತ್ತದೆ.
– ಆರಗ ಜ್ಞಾನೇಂದ್ರ, ಗೃಹ ಸಚಿವ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ಆಸ್ತಿಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕು ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದರೆ, ಅದಕ್ಕೆ ಸರಕಾರ ಮನ್ನಣೆ ನೀಡುತ್ತದೆ.
- ವಿ. ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ