Advertisement

ಐತಿಹಾಸಿಕ ಮೆರವಣಿಗೆಗೆ ಸಾಕ್ಷಿಯಾದ ಜಗಳೂರು

01:53 PM Feb 01, 2018 | |

ದಾವಣಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆ ದಿನ ನಡೆಯುವ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಗೆ ಲಕ್ಷಾಂತರ ಭಕ್ತರ ಸಮೂಹ ಸಾಕ್ಷಿಯಾಯಿತು. ಸಿರಿಗೆರೆ ತರಳಬಾಳು ಮಠದ ಪವಿತ್ರ ಪರಂಪರೆಯಂತೆ ಮಠದ ಪೀಠಾಧಿಪತಿಗಳ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದಂದು ಮಾತ್ರ ನಡೆಯುತ್ತದೆ. ವಿಶೇಷವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಕುಳಿತ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ
ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಕ್ಕಾಗಿ ತುದಿಗಾಲ ಮೇಲೆ ಅಸಂಖ್ಯಾತ ಭಕ್ತ ಸಮೂಹ ಕಾಯುತ್ತಿದ್ದರು. ಶ್ರೀಗಳು ಮೆರವಣಿಗೆಯಲ್ಲಿ ಸಾಗುವ ದೃಶ್ಯವನ್ನು ನಾಡಿನ ದಶದಿಕ್ಕುಗಳಿಂದಲೂ ಆಗಮಿಸಿದ ಭಕ್ತ ಸಮೂಹ ಕಣ್ಮನ ತುಂಬಿಕೊಂಡಿತು.

Advertisement

ಜಗಳೂರು ಪಟ್ಟಣದಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಭಕ್ತರು ಕಂಡು ಬಂದರು. ಭಕ್ತ ಸಾಗರದ ಮಧ್ಯೆ ಸಾಗಿ ಬಂದ ಮೆರವಣಿಗೆ ತರಳಬಾಳು ಮಠದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿತ್ತು. ಮೆರವಣಿಗೆಯ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಮನೆ ಮಹಡಿ, ಮರ, ಕಾಂಪೌಂಡ್‌ಗಳನ್ನು ಏರಿ ಕುಳಿತಿದ್ದ ಭಕ್ತರು, ಸಿರಿಗೆರೆ ತರಳಬಾಳು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ
ದರ್ಶನ ಪಡೆದರು. ಐತಿಹಾಸಿಕ ಮೆರವಣಿಗೆಗೆ ಡೊಳ್ಳು, ಕಹಳೆ, ಕೀಲುಕುದುರೆ, ಹುಲಿವೇಶ, ನಂದಿಕೋಲು, ವೀರಗಾಸೆ, ಭಜನಾ ತಂಡಗಳು ಹೀಗೆ ಹತ್ತು ಹಲವು ಜಾನಪದ ಕಲಾ ತಂಡಗಳು ಇನ್ನಷ್ಟು ರಂಗು ತಂದಿದ್ದವು. ಡಾ| ಶಿವಮೂರ್ತಿ ಶಿವಾಚಾರ್ಯ
ಸ್ವಾಮೀಜಿ ಪಲ್ಲಕ್ಕಿಯಲ್ಲಿ ಆಸೀನರಾದಾಗ ಸಮಿತಿ ಕಾರ್ಯದರ್ಶಿ ಡಾ| ಜಿ. ಮಂಜುನಾಥಗೌಡ ಹಾಗೂ ಖಜಾಂಚಿ ಯು.ಜಿ. ಶಿವಕುಮಾರ್‌ ಮಾಲಾರ್ಪಣೆ ಮಾಡಿ ಭಕ್ತಿಕಾಣಿಕೆ ಸಮರ್ಪಿಸಿದರು.

ಈ ಐತಿಹಾಸಿಕ ಮೆರವಣಿಗೆ ಪಾಪಯ್ಯನಾಯಕ ದೇವಾಲಯದ ಸಮೀಪ ಇರುವ ಶಿವನಗೌಡರ ಮನೆಯಿಂದ ಹೊರಟು ಭುವನೇಶ್ವರಿ ಸರ್ಕಲ್‌, ನೆಹರೂ ಸರ್ಕಲ್‌, ಕೆ.ಇ.ಬಿ. ಸರ್ಕಲ್‌, ನಗರದ ಪ್ರಮುಖ ಬೀದಿಗಳ ಮೂಲಕ ಹುಣ್ಣಿಮೆ ಮಹೋತ್ಸವದ ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ತರಳಬಾಳು ಕೇಂದ್ರದಲ್ಲಿ ಅಂತ್ಯಗೊಂಡಿತು. ಮಠದ ಬಿರುದಾವಳಿಗಳನ್ನು ಹಿಡಿದ ಯುವಕರು, ಚಾಮರ ಬೀಸುತ್ತ ಸಾಗಿದ ಪಾರುಪತ್ತೆಗಾರರು ಅಲ್ಲದೆ ಹಲವು ಜಾನಪದ ಕಲಾತಂಡಗಳು, ಶಿವಸೈನ್ಯ, ಯುವಪಡೆಗಳು ವಿಶೇಷ
ದಿರಿಸಿನಿಂದ ಆಕರ್ಷಿಸಿದರು. ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್‌.ಪಿ. ರಾಜೇಶ್‌, ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಟಿ. ಗುರುಸಿದ್ಧನಗೌಡ, ಮಹೋತ್ಸವ ಕಾರ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಕೆ.ಬಿ. ಕಲ್ಲೇರುದ್ರೇಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next